

ಕೊಳ್ಳೇಗಾಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ವಕೀಲ ಶೂ ಎಸೆದಿರುವುದನ್ನು ಖಂಡಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ವಿವಿಧ ಗ್ರಾಮಗಳ ದಲಿತ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
ದಲಿತ ಮುಖಂಡ ಪಾಳ್ಯ ಪರಶಿವಮೂರ್ತಿ ಮಾತನಾಡಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ಶೂ ಎಸೆಯುವ ಮೂಲಕ ನ್ಯಾಯಾಂಗ ನಿಂದನೆ ಮಾಡಿರುವುದು ದೇಶವೇ ತಲೆ ತಗ್ಗಿಸುವ ವಿಚಾರವಾಗಿದೆ. ಮೇಲ್ವರ್ಗಕ್ಕೆ ಸೇರಿದ ವಕೀಲ ದಲಿತ ಸಮುದಾಯದ ನ್ಯಾಯಮೂರ್ತಿಗೆ ಶೂ ಎಸೆದಿರುವುದು ಖಂಡನೀಯ. ಈ ಕೃತ್ಯ ವಕೀಲನ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ. ಈ ಪ್ರಕರಣಕ್ಕೆ ದೇಶದೆಲ್ಲಡೆ ಖಂಡನೆ ವ್ಯಕ್ತವಾಗಿದೆ. ಈ ಘಟನೆ ನೋಡಿದರೆ ದೇಶದಲ್ಲಿ ದಲಿತರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ತಿಳಿಯಬಹುದಾಗಿದೆ. ಈ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳದೆ ಪ್ರತಿಭಟನೆಗಳು ಹೆಚ್ಚಿನ ರೀತಿಯಲ್ಲಿ ನಡೆಸಿ ನ್ಯಾಯಾಂಗ ನಿಂದನೆ ಮಾಡಿದ ವಕೀಲ ನ್ಯಾಯಮೂರ್ತಿಗಳ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು. ಕಾನೂನಿನಂತೆ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಶಾಂತರಾಜು ಬಸ್ತೀಪುರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಸುಪ್ರೀಂ ಆಗಿದೆ. ಆದರಿಲ್ಲಿ ವಕೀಲನೊಬ್ಬ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಶೂ ಎಸೆಯುವ ಮೂಲಕ ದೌರ್ಜನ್ಯ ಎಸಗಿರುವುದು ನಿಜಕ್ಕೂ ಹೀನ ಕೃತ್ಯವಾಗಿದೆ. ಸಂವಿಧಾನದಡಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಕಾನೂನು ಹಾಗೂ ಸಂವಿಧಾನಕ್ಕೆ ಇನ್ಮುಂದೆ ಅಪಚಾರ ವಾಗದಂತೆ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಲಕ್ಷಣ್ ಧನಗೆರೆ, ಮಹದೇವಸ್ವಾಮಿ ಕಾಮಗೆರೆ, ಜೋಶಿ, ಸಿದ್ದಮರಿ ಲಿಂಗಣಾಪುರ, ಭೀಮನಗರ ಯಜಮಾನ ಪಾಪಣ್ಣ, ಶಿವಣ್ಣ, ಶಿವಕುಮಾರ್, ವೆಂಕಟರಾಮು ಧನಗೆರೆ , ಚಾಮರಾಜು, ನಾಗರಾಜು, ಶಂಕರ್, ಸೋಮಣ್ಣ, ಮುದ್ದಣ್ಣ ಮತ್ತಿತರರು ಭಾಗವಹಿಸಿದ್ದರು.