ಹುಣಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಸರಕು ವಾಹನ ಕಾಯ್ದೆಯನ್ನು ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಅಸೋಸಿಯೇಷನ್ ಕರೆ ಮೇರೆಗೆ ಜ.17ರಿಂದ ತಾಲೂಕಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ಹುಮಾಯೂನ್ ಪಾಷ ತಿಳಿಸಿದರು.
ಕೇಂದ್ರ ಸರ್ಕಾರ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಅವೈಜ್ಞಾನಿಕ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ನೀಡಿರುವುದು ವಾಹನ ಚಾಲಕರು ಮತ್ತು ಮಾಲೀಕರ ವಿರೋಧಿ ನೀತಿಯಾಗಿದೆ. ಮುಷ್ಕರಕ್ಕೆ ಮಿನಿಗೂಡ್ಸ್ ವಾಹನ, ಆಟೋ ಚಾಲಕರ ಸಂಘದವರು ಸಹ ಬೆಂಬಲ ವ್ಯಕ್ತಪಡಿಸಿದ್ದು ವಾಹನಗಳನ್ನು ನಗರದ ಎಪಿಎಂಸಿ ಯಾರ್ಡ್ ಬಳಿ ನಿಲ್ಲಿಸಿ ಮುಷ್ಕರ ಆರಂಭಿಸಲಾಗುವುದು. ಹಾಲು, ತರಕಾರಿ, ಗ್ಯಾಸ್ ಸರಬರಾಜು ವಾಹನಗಳನ್ನು ಹೊರತಪಡಿಸಿ ಉಳಿದ ವಾಹನಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಅಧ್ಯಕ್ಷ ವಸೀಂ ಮಾತನಾಡಿ, ತಾಲೂಕಿನಾದ್ಯಂತ ಎಲ್ಲ ವಾಹನಗಳ ಮಾಲೀಕರು ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.
ಸಂಘದ ಮಾಜಿ ಅಧ್ಯಕ್ಷ ಮಹಮದ್ ರಫೀ, ಖಜಾಂಚಿ ನಜೀರ್‌ಬೇಗ್, ಮಿನಿಗೂಡ್ಸ್ ವಾಹನ ಚಾಲಕ ಸಂಘದ ಚಂದ್ರಶೆಟ್ಟಿ, ಆಟೋ ಸಂಘದ ಶಿಲ್ಪಿ ಇದ್ದರು.