ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

karave
ರಾಜ್ಯ ಸರ್ಕಾರ ಬೆಲೆ ಏರಿಕೆ ನೀತಿ ಖಂಡಿಸಿ ಕರವೇ ಸಿಂಹ ಸೇನೆ ಸಂಘಟನೆಯ ಎಂ.ರವಿ ಪ್ರಸಾದ್, ಗೋಪಿ, ಎಸ್.ಎಂ.ಮಧುಸೂದನ್, ನಯಾಜ್, ಕಿರಣ್, ರಘು, ಅನಿಲ್, ಭರತ್, ಲಿಂಗರಾಜು, ಅಭಿಷೇಕ್, ರಾಹುಲ್ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಬಹುತೇಕ ವಸ್ತುಗಳ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ಕಷ್ಟವಾಗುತ್ತಿದೆ. ಹಾಲು, ತರಕಾರಿ, ಹಣ್ಣು, ಗ್ಯಾಸ್, ಮುಂತಾದ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವೂ ಗಗನಮುಖಿಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಲೂ ಪಾಲಕರು ಪರದಾಡುವಂತಾಗಿದೆ. ಪಾಲಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜನರು ಹಣ ಉಳಿತಾಯ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ಬದುಕು ಬೀದಿಗೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೂಡಲೇ ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಮತ್ತು ಜನರ ಮೇಲೆ ಉಂಟಾಗುತ್ತಿರುವ ಹೊರೆಯನ್ನು ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರವೇ ಸಿಂಹ ಸೇನೆಯ ರಾಜ್ಯಾಧ್ಯಕ್ಷ ಎಂ. ರವಿ ಪ್ರಸಾದ್, ಜಿಲ್ಲಾಧ್ಯಕ್ಷ ಎಸ್.ಎಂ.ಮಧುಸೂದನ್, ಪ್ರಮುಖರಾದ ನಯಾಜ್, ಗೋಪಿ, ಕಿರಣ್, ವೆಂಕಟೇಶ್, ರಘು, ಅನಿಲ್ ಶರತ್, ಲಿಂಗರಾಜು, ಭರತ್, ಅಭಿಷೇಕ್, ನೂರುಲ್ಲಾ, ರಾಹುಲ್, ಶಿವಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net