

ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್‌ಪೋರ್ಟ್ಸ್‌ನಿಂದ ರಾಸಾಯನಿಕಯುಕ್ತ ನೀರು ಭದ್ರಾ ನಾಲೆಗೆ ಬಿಡುತ್ತಿರುವುದನ್ನು ವಿರೋಧಿಸಿ ನಿದಿಗೆ-ಮಾಚೇನಹಳ್ಳಿ ಪರಿಸರ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಸೆ.14ರ ಬೆಳಗ್ಗೆ 10ಕ್ಕೆ ಶಾಹಿ ಎಕ್ಸ್‌ಪೋರ್ಟ್ಸ್ ಎದುರು ಪ್ರತಿಭಟನೆ ನಡೆಸಲಿದ್ದಾರೆ.
ರಾಸಾಯನಿಕಯುಕ್ತ ನೀರನ್ನು ಶುದ್ಧೀಕರಿಸದೇ ಭದ್ರಾ ಎಡದಂಡೆ ನಾಲೆಗೆ ಹರಿಸಲಾಗುತ್ತಿದೆ. ಇದರಿಂದ ನಾಲೆಯ ನೀರು ಬಳಕೆ ಮಾಡುವುದೇ ಕಷ್ಟವಾಗಿದೆ. 10 ವರ್ಷಗಳಿಂದಲೂ ನಿದಿಗೆ, ಸೋಗಾನೆ, ಹಾರೋಘಟ್ಟ, ರಾಂಪುರ, ಕಾಚಿನಕಟ್ಟೆ, ಸಂತೆಕಡೂರು, ಒಡ್ಡಿನಕೊಪ್ಪ, ದುಮ್ಮಳ್ಳಿ, ರೆಡ್ಡಿಕ್ಯಾಂಪ್, ಮಲವಗೊಪ್ಪ ಭಾಗದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವೇದಿಕೆ ಪ್ರಮುಖ ಎಚ್.ಸಿ.ಬಸವರಾಜಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
10 ವರ್ಷಗಳಿಂದಲೂ ಈ ಭಾಗದ ಜನರು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ಈ ಅವಧಿಯಲ್ಲಿ ಅನೇಕ ಕೆರೆಗಳ ನೀರು ಬಳಕೆಗೆ ಬಾರದಂತಾಗಿದೆ. ಕೃಷಿ ಜಮೀನು ಬರಡಾಗಿದೆ. ಕೆರೆಯಲ್ಲಿದ್ದ ಜಲಚರ, ಮೀನುಗಳು ಮೃತಪಟ್ಟಿವೆ. ಆದರೂ ಕಾರ್ಖಾನೆಯವರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲೆಗೆ ಕಾರ್ಖಾನೆ ರಾಸಾಯನಿಕಯುಕ್ತ ನೀರು ಸೇರುತ್ತಿದೆ. ನಾಲೆ ನೀರನ್ನು ಬಳಕೆ ಮಾಡಿದರೆ ಚರ್ಮ ರೋಗ ಬರುತ್ತಿದೆ. ಹಲವು ವರ್ಷಗಳಿಂದ ಇಲ್ಲಿನ ಜನ ನಿರಂತರವಾಗಿ ಕೆಮ್ಮು, ಜ್ವರ ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 10 ಸಾವಿರ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಆದರೂ ಕಾರ್ಖಾನೆಯವರು ನೀರು ಶುದ್ಧೀಕರಣಕ್ಕೆ ಒತ್ತು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಹಿ ಎಕ್ಸ್‌ಪೋರ್ಟ್ಸ್‌ನಿಂದ ಸಾವಿರಾರು ಮಂದಿಗೆ ಉದ್ಯೋಗ ಸಿಕ್ಕಿದೆ. ಹೀಗಾಗಿ ನಾವು ಕಾರ್ಖಾನೆ ವಿರುದ್ಧವಾಗಿಲ್ಲ. ಕಾರ್ಖಾನೆ ಮುಚ್ಚಲಿ ಎಂಬುದು ನಮ್ಮ ಆಶಯವಲ್ಲ. ಕಾರ್ಖಾನೆ ಇನ್ನೂ ಚೆನ್ನಾಗಿ ನಡೆಯಲಿ. ಆದರೆ ವಿಷಯುಕ್ತ ನೀರನ್ನು ಮಾತ್ರ ಹೊರಗೆ ಬಿಡುವುದು ಬೇಡ ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.
ಕಾರ್ಖಾನೆಯ ಪರವಾಗಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳನ್ನು ಅವರೇ ನಿಭಾಯಿಸುತ್ತಿದ್ದಾರೆ. ಹೀಗಾಗಿ ಕಾರ್ಖಾನೆ ಮಾಡಿರುವ ಅಚಾತುರ್ಯಕ್ಕೆ ಯಾವುದೇ ಕ್ರಮ ಆಗುತ್ತಿಲ್ಲ. ಇದೀಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕಾರ್ಖಾನೆ ಮುಚ್ಚಲು ಆದೇಶ ನೀಡಿದ್ದಾರೆ. ಕಾರ್ಖಾನೆ ಮುಚ್ಚುವ ಬದಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಕೆ ಮಾಡಿಕೊಳ್ಳಲಿ ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪ್ರಮುಖರಾದ ದುಮ್ಮಳ್ಳಿ ಶಿವಮ್ಮ, ವೆಂಕಟೇಶ ನಾಯ್ಕ, ದೇವಕುಮಾರ್, ಆನಂದ್, ರುದ್ರೇಶ್, ಗೋವಿಂದರಾಜ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.