

ಸಾಗರ: ನಗರಸಭೆ ಆಯುಕ್ತ ನಾಗಪ್ಪ ಅವರು ಪಕ್ಷದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕೆಆರ್‌ಎಸ್ ಪಕ್ಷದ ಪ್ರಮುಖರು, ಪದಾಧಿಕಾರಿಗಳು ನಗರಸಭೆ ಎದುರು ಸೋಮವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ವಿಳಂಬವಾಗಿರುವುದು, ಶ್ರೀಧರ ನಗರ ಭಾಗದಲ್ಲಿ ಉದ್ಯಾನ ಹಾಳು ಬಿದ್ದಿರುವುದು, ರಸ್ತೆ ತಿರುವಿನಲ್ಲಿ ಹಂಪ್ ಹಾಕದಿರುವುದರಿಂದ ಅಪಘಾತವಾಗಿ ಇಬ್ಬರು ಹುಡುಗರಿಗೆ ಗಾಯವಾಗಿರುವುದು ಮತ್ತಿತರ ಸಮಸ್ಯೆಗಳ ಕುರಿತು ಪೌರಾಯುಕ್ತರಿಗೆ ಮನವಿ ನೀಡಲು ಶ್ರೀಧರನಗರಕ್ಕೆ ಬರಲು ಪೌರಾಯುಕ್ತರಿಗೆ ಕರೆ ಮಾಡಿದ್ದರೂ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ನಗರಸಭೆ ಆವರಣದಿಂದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಮನವೊಲಿಸಿ ಕಳಿಸಿದ ನಂತರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪೌರಾಯುಕ್ತ ನಾಗಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ವೀರಭದ್ರಪ್ಪ, ಮಂಜುನಾಥ್, ನಾಗಭೂಷಣ್, ಗಿರೀಶ್, ಶಿವು, ಪ್ರವೀಣ್, ಮಹೇಂದ್ರ, ಸಂಜಯ್, ಕಾಶಿನಾಥ್, ರಾಮಪ್ಪ ಇತರರಿದ್ದರು.
ಪೌರ ಕಾರ್ಮಿಕರ ಪ್ರತಿಭಟನೆ: ಸಾಗರ ನಗರಸಭೆ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕೆಆರ್‌ಎಸ್ ಪಕ್ಷದವರು ಪೌರಾಯುಕ್ತರ ಜೀಪು ತೆಗೆಯಲು ಬಿಡದೆ ಇರುವುದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ತೊಂದರೆ ನೀಡಿರುವುದನ್ನು ಖಂಡಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಮಂಗಳವಾರ ಪೌರ ಕಾರ್ಮಿಕರ ಸಂಘದಿಂದ ನಗರ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.