

ಶಿವಮೊಗ್ಗ: ಶಿಕಾರಿಪುರ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಸ ಸಮಯ ಪ್ರತಿಭಟಿಸಿದರು.
ಶಿಕಾರಿಪುರ ಪುರಸಭೆಯಲ್ಲಿ ವಿವಿಧ ಯೋಜನೆಗಳಡಿ ನಿರ್ಮಿಸಿರುವ 64 ವಾಣಿಜ್ಯ ಮಳಿಗೆಗಳನ್ನು 12 ವರ್ಷಗಳ ಅವಧಿಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ಇ-ಹರಾಜು ಮಾಡಲಾಗಿದೆ. ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದೆ ಭ್ರಷ್ಟಾಚಾರ ಎಸಗಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮೊದಲ ನಿರಾಕರಣೆಯ ಹಕ್ಕು ಆಧಾರದಲ್ಲಿಯೇ ಹೆಚ್ಚಾಗಿ ಆಯ್ಕೆ ಮಾಡಿದ್ದು, ಈ ಆಧಾರದಲ್ಲಿ ಆಯ್ಕೆಯಾಗಿರುವ ಬಹುತೇಕರು ಮಳಿಗೆಗಳನ್ನು ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಿದ್ದಾರೆ. ಆದರೆ ನಿಯಮದ ಪ್ರಕಾರ ಒಳ ಬಾಡಿಗೆ ಕೊಡುವಂತಿಲ್ಲ. ಈ ಷರತ್ತುಗಳಿದ್ದರೂ 25 ಮಳಿಗೆಗಳನ್ನು ಬೇರೆಯವರಿಗೆ ಅಧಿಕ ಬಾಡಿಗೆಗೆ ಕಾನೂನುಬಾಹಿರವಾಗಿ ನೀಡಲಾಗಿದೆ ಎಂದರು.
ಪುರಸಭೆಯಿಂದ ಬಾಡಿಗೆ ಪಡೆದ ಮೇಲೆ ಮಳಿಗೆ ಅಥವಾ ಕಟ್ಟಡದ ಯಾವುದೇ ಭಾಗ ಬದಲಾವಣೆ ಮಾಡಬಾರದೆಂಬ ಷರತ್ತು ಇದ್ದರೂ ಒಂದೇ ಮಳಿಗೆಯನ್ನು ಎರಡು ಮೂರು ಭಾಗಗಳನ್ನಾಗಿಸಿ ಬೇರೆಯವರಿಗೂ ಬಾಡಿಗೆ ಕೊಟ್ಟಿದ್ದಾರೆ. ಬಾಡಿಗೆ ಪಡೆದ ಮಳಿಗೆಗಳನ್ನು ವರ್ಕ್‌ಶಾಪ್ ಅಥವಾ ಆಟೋಮೊಬೈಲ್ಸ್‌ಗೆ ನೀಡಬಾರದೆಂಬ ಷರತ್ತು ವಿಧಿಸಿದ್ದರೂ ಷರತ್ತು ಮೀರಿ ಬಾಡಿಗೆ ಕೊಡಲಾಗಿದೆ. ಟೆಂಡರ್ ಬಗ್ಗೆ ಎಸ್‌ಐಟಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೆಳೆಯರ ಬಳಗದ ಅಧ್ಯಕ್ಷ ಅನಿಲ್ ಕುಂಚಿ, ಪ್ರಮುಖರಾದ ಬೀಬೀ ಆಯಿಷಾ, ಯುವರಾಜ್, ರವಿ, ಇಮ್ತಿಯಾಜ್, ಪ್ರಶಾಂತ್, ಪುಷ್ಪಾ, ಮಾಲಾ ಗೌಡ, ನಾಗರಾಜ್, ಲಕ್ಷ್ಮೀ, ರೂಪಾ, ಬಂಗಾರಲಕ್ಷ್ಮೀ, ಜಯಂತಿ ಇತರರಿದ್ದರು.