

ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ! ಸಾರಿಗೆ ಅಸ್ತವ್ಯಸ್ಥ! ಶಾಲಾ ಮಕ್ಕಳಿಗೆ ತೊಂದರೆ
ವಿಜಯವಾಣಿ ಸುದ್ದಿಜಾಲ ಗದಗ
ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು "ಡಾ. ಬಿ.ಆರ್. ಅಂಬೇಡ್ಕರ ಅವರ ಹೆಸರನ್ನು ಹೇಳುವುದು ಕಾಂಗ್ರೆಸ್ಸಿಗೆ ವ್ಯಸನ ಆಗಿದೆ' ಎಂದು ನೀಡಿರುವ ಹೇಳಿಕೆ ವಿರುದ್ಧವಾಗಿ ವಿವಿಧ ದಲಿತ ಸಂಟನೆಗಳು ಮಂಗಳವಾರ ನೀಡಿದ್ದ ಜಿಲ್ಲಾ ಬಂದ್ ಕರೆಗೆೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿಯಿತು. ಜಿಲ್ಲೆಯ ಕೆಲವಡೆ ಭಾಗಶಃ ಬಂದ್ ಯಶಸ್ವಿಯೂ ಆಯಿತು.
ಬೆಳಗ್ಗೆ 8 ಗಂಟೆಯಿಂದಲೇ ಪ್ರತಿಭಟನಾಕಾರರು ಬೈಕ್ ರ್ಯಾಲಿ ಮೂಲಕ ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗುತ್ತ ನಗರಾದ್ಯಂತ ಸಂಚರಿಸಿದರು. ಪ್ರಮುಖ ವೃತ್ತಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಮತ್ತು ಸಿಬ್ಬಂದಿ ನಿಯೋಜಿಸುವ ಮೂಲಕ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಿತು. ಗದಗ ನಗರದ ಮುಳಗುಂದ ನಾಕಾ ಮತ್ತು ಗಾಂಧಿ ವೃತ್ತದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು. ಇನ್ನೂಳಿದಂತೆ ಬೆಟಗೇರಿಯಿಂದ ಗದಗ ನಗರಕ್ಕೆ ಸಾಗುವ ವೃತ್ತಗಳಲ್ಲಿ ಪ್ರತಿಭಟನೆ ಜರುಗಿದವು.
ಬೆಳಗ್ಗೆ 8 ಗಂಟೆಗೆ ಮುಳಗುಂದ ನಾಕಾ ಬಳಿ ಪ್ರತಿಭಟನಾಕಾರರ ಸಮೂಹ ಸೇರುತ್ತಿದ್ದಂತೆ ಎಚ್ಚೇತ ಪೊಲೀಸ್ ಇಲಾಖೆ ಅಧಿಕ ಸಿಬ್ಬಂದಿ ನಿಯೋಜಿಸಿತು. ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ತಂದಿದ್ದ ಟೈಯರ್ ಅನ್ನು ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರಿಂದ ಕಸಿದುಕೊಂಡ ಹೋದರು. ತದ ನಂತರ ಅಮಿತ್ ಶಾ ಅವರ ಭಾವಚಿತ್ರ ಸುಟ್ಟು ಆಕ್ರೋಶ ಹೊರಹಾಕಿದರು. ಗಾಂಧಿವೃತ್ತದಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ಮ 2 ಗಂಟೆವರೆಗೂ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಾನವ ಸರಪಳಿ ನಿಮಿರ್ಸಿದ್ದ ದಲಿತ ಸಂಟನೆ ಸದಸ್ಯರು ಅಮಿತ ಶಾ ವಿರುದ್ಧ ದಿಕ್ಕಾರ ಘೋಷಣೆ ಕೂಗಿದರು. ಪ್ರತಿಭಟನೆಗೆ ಬೆದರಿದ ಮಾಲೀಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದರು. ಮಧ್ಯಾಹ್ನ 3 ಗಂಟೆ ವರೆಗೆ ನಗರವು ಬೀಕೋ ಎನ್ನುವಂತಿತ್ತು. ಸಂಟನೆಗಳ ನೀಡಿದ್ದ ಪ್ರತಿಭಟನೆಯ ಕರೆಗೆ ಜಿಲ್ಲಾ ಕಾಂಗ್ರೆಸ್ ಪತ್ರ ಬರೆದು ಬೆಂಬಲ ಸೂಚಿಸಿತು. 3 ಗಂಟೆ ನಂತರ ಎದ್ದಿನಂತೆ ನಗರದಲ್ಲಿ ಕಾರ್ಯಚಟುವಟಿಕೆಗಳು ಮುಂದುವರಿದವು.
ಗೊಂದಲ ಏರ್ಪಟ್ಟಿತ್ತು:
ಜಿಲ್ಲೆಯಲ್ಲಿ ಬಂದ್ ಕರೆ ನೀಡಿದ್ದ ಹಿನ್ನೆಲೆ ನಗರದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಹೀಗಾಗಿ ಪಾಲಕರಲ್ಲಿ, ಶಿಕ್ಷಕರಲ್ಲಿ ಗೊಂದಲ ಮೂಡಿತ್ತು. ಬಸ್ ವ್ಯವಸ್ಥೆ ಮತ್ತು ಶಾಲಾ ವಾಹನಗಳ ವ್ಯವಸ್ಥೆ ಸ್ತಗಿತಗೊಂಡಿದ್ದರಿಂದ ಮಕ್ಕಳು ಶಾಲೆಗೆ ತೆರಳಲು ಸಮಸ್ಯೆ ಉಂಟಾಗಿತ್ತು. ಶಾಲೆ ಇದೆ ಎಂದು ಭಾವಿಸಿದ್ದ ಪೋಷಕರು ತಮ್ಮ ಸ್ವಂತ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು. ಈ ಮಧ್ಯೆ ಬೆಳಗ್ಗೆ 10.30ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಯಿತು. ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳೊಂದಿಗೆ ಮನೆಗೆ ಮರುಳಿದರು. ಗ್ರಾಮೀಣ ಭಾಗದ ಶಾಲೆಗಳು ಎಂದಿನಂತೆ ಜರುಗಿದವು. ನಗರದ ಮುಳಗುಂದ ನಾಕಾ ಬಳಿ ಸ್ಕೂಲ್ ವ್ಯಾನ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ವಿದ್ಯಾಥಿರ್ನಿ ಕಾಲಿಗೆ ಗಾಯವಾದ ಟನೆಯೂ ಜರುಗಿತು. ಪ್ರತಿಭಟನಾಕಾರರು ವಿದ್ಯಾಥಿರ್ನಿಯನ್ನು ಸಮಾಧಾನಪಡಿಸಿ ಕಳುಹಿಸಿದರು.
ಸಾರಿಗೆ ವ್ಯವಸ್ಥೆ ಬದಲಾವಣೆ:
ಪ್ರತಿಭಟನೆ ಹಿನ್ನೆಲೆ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿತ್ತು. ಹೊರ ಜಿಲ್ಲೆ, ತಾಲೂಕುಗಳಿಂದ ನಗರಕ್ಕೆ ಆಗಮಿಸುವ ಬಸ್ ಗಳನ್ನು ನಗರದ ಹೊರವಲಯದಲ್ಲೇ ನಿಲ್ಲಿಸುವಂತೆ ಇಲಾಖೆ ಆದೇಶ ಹೊರಡಿಸಿತ್ತು. ಮುಂಡರಗಿ, ಕೊಪ್ಪಳದಿಂದ ಬರುವ ಬಸ್ಗಳನ್ನು ನಗರದ ಹೊರವಲಯದ ತೊಂಟದಾರ್ಯ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಅದೇ ರೀತಿ, ರೋಣ ಮತ್ತು ಗಜೇಂದ್ರಗಡ ಬಸ್ಗಳು ಬೆಟಗೇರಿ ಟಕ ವರೆಗೆ, ಹುಬ್ಬಳ್ಳಿಯಿಂದ ಬರುವ ಬಸ್ಗಳು ಹುಬ್ಬಳ್ಳಿ ರಸ್ತೆಯ ಕೆಯಬಿ ಕ್ರಾಸ್ ವರಗೆ, ಲೆ$್ಮಶ್ವರ, ಶಿರಹಟ್ಟಿ ಬಸ್ಗಳು ಧೋಬಿ ಘಾಟ್ ವರೆಗೆ ಮತ್ತು ಸವಡಿ, ಹುಯೀಲಗೊಳ ಗ್ರಾಮದಿಂದ ಬರುವ ಬಸ್ಗಳನ್ನು ಹುಯೀಲಗೋಳ ರಸ್ತೆಯ ರಾಣಾ ಪ್ರತಾಪ್ ಸಿಂಹ ಶಾಲೆ ವರೆಗೆ ಮಾತ್ರ ಸಂಚರಿಸಲು ಸಾರಿಗೆ ಇಲಾಖೆ ಸೂಚಿಸಿತ್ತು.
ಬಾಕ್ಸ್:
ಸಾರಿಗೆ ಇಲಾಖೆ ಆದೇಶದಂತೆ ಹೊರ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ ಬಸ್ಗಳು ನಗರದ ಹೊರವಲಯದಲ್ಲೇ ನಿಲ್ಲಿಸುತ್ತಿದ್ದರಿಂದ ಆಟೋ ಚಾಲಕರಿಗೆ ಲಾಭವಾಗಿ ಪರಿಣಮಿಸಿತು. ನಗರದ ಒಳಗೆ ಬರುವ ಜನರು ಮಂಗಳವಾರ ಆಟೋವನ್ನು ಅವಲಂಭಿಸಿದ್ದರು. ಎಂದಿಗಿಂತಲೂ ಆಟೋ ಚಾಲಕರಿಗೆ ಮಂಗಳವಾರ ಲಾಭವಾಗಿ ಪರಿಣಮಿಸಿತು.