

ಹುಣಸೂರು : ನಗರದ ಡಾ.ಬಾಬು ಜಗಜೀವನರಾಂ ಸಮುದಾಯ ಭವನದ ಒಂದು ಭಾಗದ ಕಾಂಪೌಂಡ್ ಒಡೆದು ಹಾನಿ ಮಾಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಸದಸ್ಯರು ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ವೆಂಕಟೇಶ್ ಬೆಳ್ತೂರು ಮಾತನಾಡಿ, ಸರ್ಕಾರದ ವತಿಯಿಂದ ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಗಜೀವನರಾಂ ಭವನದ ನಿರ್ಮಾಣ ಕಾರ್ಯ ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ನಡುವೆ ಭವನದ ಒಂದು ಭಾಗದಲ್ಲಿನ ಕಾಂಪೌಂಡ್‌ನ ಕೆಲಭಾಗಗಳನ್ನು ಖಾಸಗಿ ವ್ಯಕ್ತಿಗಳು ಒಡೆದುಹಾಕಿದ್ದರೂ ತಾಲೂಕು ಆಡಳಿತ ಇತ್ತ ಗಮನಿಸುತ್ತಿಲ್ಲ. ಇದು ಖಂಡನೀಯ. ಕೂಡಲೇ ಇತ್ತ ಗಮನಹರಿಸಿ ಭವನದ ರಕ್ಷಣೆ ಮುಂದಾಗದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಜೆ ಮಹದೇವು, ದಸಂಸ ಮುಖಂಡ ಕೆ ನಂಜಪ್ಪ ಬಸವನಗುಡಿ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ್, ಬಸವರಾಜು ಕಲ್ಕುಣಿಕೆ, ನಗರ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರೆಗೌಡ, ರಮೇಶ್ ಇತರರು ಇದ್ದರು. ನಂತರ ತಹಸೀಲ್ದಾರ್ ಮಂಜುನಾಥ್‌ರಿಗೆ ಮನವಿ ಸಲ್ಲಿಸಲಾಯಿತು.