

ಕೊಳ್ಳೇಗಾಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ನಡೆದಿರುವ ಅಪಮಾನವನ್ನು ಖಂಡಿಸಿ ಮಂಗಳವಾರ ತಾಲೂಕಿನ ವಕೀಲರ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂನಿಂದ ಹಲ್ಲೆ ನಡೆಸಲು ಮುಂದಾದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ವಕೀಲ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ವಕೀಲ ರಾಕೇಶ್ ಕಿಶೋರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಕೃತ್ಯವು ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದಂತಾಗಿದೆ. ಹಾಗಾಗಿ ತಪ್ಪಿತಸ್ಥನನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ನ್ಯಾಯಮೂರ್ತಿಗಳಿಗೆ ಅಪಮಾನ ಎಸಗಿದ ವಕೀಲ ರಾಕೇಶ್ ಕಿಶೋರ್‌ಗೆ ಕಾನೂನು ರೀತಿ ಕಠಿಣ ಶಿಕ್ಷೆಯಾಗಲೆಬೇಕು ಎಂದರು.
ಬಳಿಕ ತಾಲೂಕು ವಕೀಲ ಸಂಘದ ಪದಾಧಿಕಾರಿಗಳು ಉಪ ವಿಭಾಗಧಿಕಾರಿ ದಿನೇಶ್‌ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷೆ ಸೀಮಾ ಸುಲ್ತಾನ್, ಕಾರ್ಯದರ್ಶಿ ಕೆಂಪರಾಜು, ಹಿರಿಯ ವಕೀಲರಾದ ಅರಸಶೆಟ್ಟಿ, ವೆಂಕಟಾಚಲ, ಅಮೃತರಾಜ್, ರಾಜೇಂದ್ರ, ಚಂದ್ರಶೇಖರ್, ಹರ್ಷಿತ್, ರಾಜು, ನಾಗೇಂದ್ರ, ಭೀಮರಾವ್, ಪ್ರಕಾಶ್, ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಶಾಂತರಾಜು, ನಾಗೇಂದ್ರ, ಮಾಜಿ ಅಧ್ಯಕ್ಷ ಎಸ್.ರಮೇಶ್, ಮುಖಂಡ ಜಗದೀಶ್, ಪ್ರಭುಸ್ವಾಮಿ ಮತ್ತಿತರರಿದ್ದರು.