ಒಪ್ಪಂದದಲ್ಲಿ ಸೂಕ್ಷ್ಮ ವಲಯಗಳ ರಕ್ಷಣೆ

piyush goyal
Published on

ನವದೆಹಲಿ: ಬ್ರಿಟನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಹೈನುಗಾರಿಕೆ, ಅಕ್ಕಿ, ಸಕ್ಕರೆ ಸೇರಿದಂತೆ ಎಲ್ಲಾ ಸೂಕ್ಷ್ಮ ವಲಯಗಳನ್ನು ಭಾರತ ರಕ್ಷಿಸಿಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶನಿವಾರ ತಿಳಿಸಿದ್ದಾರೆ.

ಪಾದರಕ್ಷೆ, ಜವಳಿ, ರತ್ನ, ಆಭರಣಗಳಂತಹ ಕಾರ್ವಿುಕ-ಕೇಂದ್ರಿತ ಉತ್ಪನ್ನಗಳ ರಫ್ತಿಗೆ ಈ ಒಪ್ಪಂದ ಉತ್ತೇಜನ ನೀಡಲಿದೆ. ಸೂಕ್ಷ್ಮ ವಲಯಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಭಾರತಕ್ಕೆ ಭಾರಿ ಪ್ರಮಾಣದ ಲಾಭ ಆಗುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಭಾರತಕ್ಕೆ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳ ಬಾಗಿಲು ತೆರೆದಂತಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಜೂನ್ 24ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಬ್ರಿಟನ್ ಸಂಸತ್ತಿನ ಅನುಮೋದನೆ ಬೇಕಾಗಿರುವುದರಿಂದ ಇದರ ಸಂಪೂರ್ಣ ಅನುಷ್ಠಾನಕ್ಕೆ ಒಂದು ವರ್ಷವೇ ಬೇಕಾಗಬಹುದು. ಈ ಮಧ್ಯೆ, ಈ ಒಪ್ಪಂದದಿಂದ ಆಗುವ ಲಾಭಗಳ ಬಗ್ಗೆ ವಿವರಿಸಲು ತಾವು ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ಉದ್ಯಮಿಗಳೊಂದಿಗೆ ಸಭೆಗಳನ್ನು ನಡೆಸಲಿರುವುದಾಗಿ ಗೋಯಲ್ ಹೇಳಿದರು.

ಅಮೆರಿಕ ಮಾತುಕತೆಗೆ ವೇಗ: ಇದೇ ವೇಳೆ, ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ವೇಗವಾಗಿ ಮುನ್ನಡೆಯುತ್ತಿವೆ. ಆಗಸ್ಟ್​ನಲ್ಲಿ ಅಮೆರಿಕದ ತಂಡ ಭಾರತಕ್ಕೆ ಭೇಟಿ ನೀಡಲಿದ್ದು, ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ. ಉಭಯ ರಾಷ್ಟ್ರಗಳು ಕಳೆದ ವಾರ ವಾಷಿಂಗ್ಟನ್​ನಲ್ಲಿ 5ನೇ ಸುತ್ತಿನ ಮಾತುಕತೆ ಮುಗಿಸಿವೆ. ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ಒಪ್ಪಂದದ ಮೊದಲ ಭಾಗ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇದು ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ ಇರುವ 191 ಶತಕೋಟಿ ಡಾಲರ್​ನಿಂದ 500 ಶತಕೋಟಿ ಡಾಲರ್​ಗೆ ಹೆಚ್ಚಿಸುವ ಗುರಿ ಹೊಂದಿದೆ. ಒಮಾನ್ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಬಹುತೇಕ ಅಂತಿಮಗೊಂಡಿವೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net