ಮಾತೃಭಾಷೆ ರಕ್ಷಣೆ ನಮ್ಮೆಲ್ಲರ ಹೊಣೆ

programme
ವಿಶ್ವ ಮಾತೃಭಾಷಾ ದಿನಾಚರಣೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. ಡಾ. ಮಧು, ಮೋಹನ್, ಕೆ.ವಿ.ಸುಂದರೇಶ್, ನಾಗರಾಜ್, ಭಾರತಿ, ಬಿ.ಎಸ್.ಆದಿಮೂರ್ತಿ ಇತರರಿದ್ದರು.
Published on

ಶಿವಮೊಗ್ಗ: ಧರ್ಮದ ಕಾರಣಕ್ಕಾಗಿ 1947ರಲ್ಲಿ ದೇಶ ವಿಭಜನೆಯಾಯಿತು. ಬಳಿಕ ಭಾಷೆಯ ಕಾರಣಕ್ಕಾಗಿ ಪಾಕಿಸ್ತಾನ ವಿಭಜನೆಯಾಯಿತು. ಬಾಂಗ್ಲಾದಲ್ಲಿ ಅನೇಕ ವಿದ್ಯಾರ್ಥಿಗಳ ಸಾವಿಗೆ ಇದು ಕಾರಣವಾಯಿತು. ಹಾಗಾಗಿ ಮಾತೃಭಾಷೆಯ ಮಹತ್ವ ಸಾರುವ ದೃಷ್ಟಿಯಿಂದ ಯುನೆಸ್ಕೋ ಮಾತೃಭಾಷಾ ದಿನಾಚರಣೆ ಘೋಷಣೆ ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ವಿಶ್ವ ಮಾತೃಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅರ್ಥವಾಗದ ಬೇರೆ ಭಾಷೆಗಳಿಗಿಂತ ಅರ್ಥವಾಗುವ ಮಾತೃಭಾಷೆಯಲ್ಲೇ ವ್ಯವಹರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಮಾತೃಭಾಷೆ ಉಳಿಯಬೇಕಾದರೆ ಉತ್ತೇಜನ ನೀಡಬೇಕು. ವಿಶ್ವದಲ್ಲಿ ಎಂಟು ಸಾವಿರ ಭಾಷೆಗಳಿವೆ. ಬೇರೆ ಭಾಷೆಯವರು ನಮ್ಮ ಮಾತೃಭಾಷೆಯನ್ನು ಹತ್ತಿಕ್ಕಲು ಬಿಡಬಾರದು. ದೇಶದಲ್ಲಿರುವ 1,900 ಭಾಷೆಗಳಲ್ಲಿ 20 ಭಾಷೆಗಳನ್ನು ಪ್ರಮುಖ ಎಂದು ಗುರುತಿಸಲಾಗಿದೆ. ಇದರಲ್ಲಿ ಕನ್ನಡವೂ ಒಂದು ಎಂದು ಹೇಳಿದರು.

ಕನ್ನಡ ಅತ್ಯಂತ ಹಿರಿಯ, ಸಮೃದ್ಧ ಮತ್ತು ಶಕ್ತಿಯುತ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಆಳುವ ಸರ್ಕಾರಗಳು ಮತ್ತು ಪ್ರಜ್ಞಾವಂತರು ನಮ್ಮ ಭಾಷೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಮಾತೃಭಾಷೆ ದಿನಾಚರಣೆ ಉದ್ದೇಶ ಕಲಿಯುವ ಸಂದರ್ಭದಲ್ಲಿ ಮಾತೃಭಾಷೆಗೆ ಮಹತ್ವ ನೀಡಬೇಕು ಎಂಬುದಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ. ಮಧು, ಜಿಲ್ಲಾ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ.ಸುಂದರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷೆ ಭಾರತಿ ರಾಮಕೃಷ್ಣ, ಒಕ್ಕಲಿಗ ಸಂಘದ ನಿರ್ದೇಶಕರಾದ ನಾಗರಾಜ್, ಬಿ.ಎಸ್.ಆದಿಮೂರ್ತಿ, ಉಂಬ್ಳೇಬೈಲ್ ಮೋಹನ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net