

ಕಾವೇರಿ ನದಿಗೂ ವಿವಾದಕ್ಕೂ ನಂಟು ಇಂದು ನಿನ್ನೆಯದಲ್ಲ. ಕಾವೇರಿ ಹರಿದಷ್ಟೂ ವಿವಾದವೂ ಸಾಗಿಬಂದಿದೆ. ನೆರೆಯ ತಮಿಳುನಾಡು ಇದೇ ವಿಚಾರ ಮುಂದೆ ಮಾಡಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದೂ ಹೊಸದೇನಲ್ಲ. ಕರ್ನಾಟಕದಲ್ಲಿ ಸರ್ಕಾರಗಳು ಬದಲಾದರೂ ನೆರೆ ರಾಜ್ಯದ ಕಿರಿಕಿರಿ ತಪ್ಪಿಲ್ಲ. ಈಗಲೂ ಅಂತಹದ್ದೇ ಒಂದು ಕಿರಿಕಿರಿಯ ಸನ್ನಿವೇಶ ಎದುರಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದೆ. ಇಷ್ಟರ ನಡುವೆಯೂ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಒಳಹರಿವಿನ ಕೊರತೆ ಇದೆ. ಶೇ. 28ರಷ್ಟು ಲಭ್ಯತೆ ಕೊರತೆ ಕಾಣಿಸಿದೆ.
ಕಬಿನಿ ಜಲಾಶಯ ಶೇ. 96 ಹಾಗೂ ಹಾರಂಗಿ ಜಲಾಶಯ ಶೇ. 73ರಷ್ಟು ತುಂಬಿದ್ದರೆ, ಹೇಮಾವತಿ ಹಾಗೂ ಕೆಆರ್ಎಸ್ ಶೇ. 54ರಷ್ಟು ಮಾತ್ರ ಭರ್ತಿಯಾಗಿದೆ. ಈ ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನೀರು ಒದಗಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ನೀರಿನ ಲಭ್ಯತೆ ಕೊರತೆಯನ್ನು ಗಮನದಲ್ಲಿರಿಸಿಕೊಂಡು ಜುಲೈ ಅಂತ್ಯದವರೆಗೆ ನೀರಿಗಾಗಿ ನೆರೆ ರಾಜ್ಯ ಕಾಯಲೇಬೇಕಾಗುತ್ತದೆ.
ಪರಿಸ್ಥಿತಿ ಹೀಗಿರುವಾಗ ನೆರೆ ರಾಜ್ಯ ತನ್ನ ಎಂದಿನ ಕಿರಿಕಿರಿ ಶುರುವಿಟ್ಟುಕೊಂಡು, ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ಅರ್ಜಿ ಹಾಕಿ ಪ್ರತಿ ದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚನೆ ಕೊಡಿಸುವಲ್ಲಿ ಸಫಲವಾಗಿದೆ.
ಅಂದ ಹಾಗೆ ಕಬಿನಿ ಜಲಾಶಯದಿಂದ ಒಳಹರಿವು ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇಷ್ಟಾದ ಮೇಲೆ ಬಿಳಿಗುಂಡ್ಲುವರೆಗಿನ ಪ್ರದೇಶದಲ್ಲಿ ಬೀಳುವ ಮಳೆಯ ನೀರು ಸಹ ತಮಿಳುನಾಡಿಗೆ ಯಥೇಚ್ಛವಾಗಿ ಹರಿಯುತ್ತಿದ್ದು, ಅದರ ಲೆಕ್ಕವೇನೂ ಪರಿಗಣಿಸುತ್ತಿಲ್ಲ. ಇಷ್ಟಾದ ಮೇಲೂ ನೆರೆ ರಾಜ್ಯ ಒಂದು ಟಿಎಂಸಿ ನೀರು ಬಿಡುಗಡೆಗೆ ಕೋರಿಕೆ ಇಡುವ ಮೂಲಕ ತನ್ನ ಕಿರಿಕಿರಿ ಚಾಳಿಯನ್ನು ಮುಂದುವರಿಸಿದೆ.
ಈ ರಾಜಕೀಯದ ಎದುರಾಗಿ ಇಡೀ ಕನ್ನಡನಾಡು ಒಟ್ಟಾಗಿ ನಿಲ್ಲಬೇಕಾಗಿದೆ. ಇಲ್ಲಿನ ರಾಜಕೀಯ ಪಕ್ಷಗಳೂ ಭಿನ್ನಾಭಿಪ್ರಾಯ ಮರೆತು ರಾಜ್ಯದ ಹಿತಾಸಕ್ತಿಯ ಪರವಾಗಿ ನಿಲ್ಲುವ ಸಂದರ್ಭ ಬಂದಿದೆ. ರಾಜ್ಯದಲ್ಲಿನ ಆಡಳಿತಾರೂಢ ಪಕ್ಷ ಇಂಡಿಯಾ ಒಕ್ಕೂಟದಲ್ಲಿನ ಸ್ನೇಹದ ಮರ್ಜಿಗಾಗಿ ಅಲ್ಲಿನ ಸರ್ಕಾರದ ಒತ್ತಾಯಕ್ಕೆ ಮಣಿದು ನೀರು ಬಿಡುಗಡೆ ಮಾಡುವುದೂ ಸಹ ಸರಿಯಲ್ಲ. ಹಿಂದೊಮ್ಮೆ ‘ಅಡ್ಡ ದಾರಿಯಲ್ಲಿ’ ನೀರು ಬಿಡುಗಡೆ ಮಾಡಿದ ಉದಾಹರಣೆ ಕಣ್ಣೆದುರಿಗಿದೆ. ಹೀಗಾಗಿ ಸರ್ಕಾರಕ್ಕೆ ನಾಡಿನ ಹಿತರಕ್ಷಣೆಯೇ ಪ್ರಮುಖ ಆದ್ಯತೆ ಆಗಬೇಕು. ಜತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಜಲಾಶಯ ಭರ್ತಿಯಾಗುವವರೆಗಾದರೂ ನೀರು ಬಿಡುಗಡೆ ಮಾಡದಂತೆ ವಿನಾಯಿತಿ ಪಡೆಯಲು ಅರ್ಜಿ ಸಲ್ಲಿಸಿ ಒತ್ತಡ ಹೇರಬೇಕು.
ಭಾನುವಾರ ಕರ್ನಾಟಕದ ಸರ್ವ ಪಕ್ಷ ಸಭೆ ಕರೆಯಲಾಗಿದ್ದು ಅಲ್ಲಿ ಕೂಡ ಎಲ್ಲಾ ಪಕ್ಷಗಳು ಒಣ ರಾಜಕೀಯ ಬದಿಗಿಟ್ಟು ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ಕೇಂದ್ರ- ರಾಜ್ಯ ಸರ್ಕಾರ ಎಂದು ಸಂಘರ್ಷ ಮಾಡಿಕೊಳ್ಳದೇ ರಾಜ್ಯದ ಪರವಾಗಿ ಒಕ್ಕೊರಲ ದನಿ ಇರಬೇಕಾಗುತ್ತದೆ. ಅದನ್ನೇ ಇಡೀ ನಾಡು ಬಯಸುತ್ತಿದೆ.