

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಗುರುವಾರ ಡೆಕ್ಕನ್, ಮೈಕ್ಯಾಪ್ಸ್ ಹಾಗೂ ತುಂಬಾಕು ಮಂಡಳಿಯ ಸಹಯೋಗದಲ್ಲಿ ರೈತರಿಗೆ ತರಬೇತಿ ಕಾರ್ಯಾಗಾರ ಮತ್ತು ಉಚಿತ ಆರೋಗ್ಯ ಶಿಬಿರವನ್ನು ಗುರುವಾರ ಆಯೋಜಿಸಲಾಗಿತ್ತು.
ಸಿಟಿಆರ್‌ಐ ವಿಜ್ಞಾನಿ ಡಾ.ರಾಮಕೃಷ್ಣ ಒಂದು ಎಕರೆ ಜಮೀನಿನಲ್ಲಿ 1000 ಕೆಜಿ ತಂಬಾಕು ಬೆಳೆಯಬೇಕು. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯಬೇಕು. ಹೆಚ್ಚು ವಿಸ್ತೀರ್ಣದಲ್ಲಿ ತಂಬಾಕು ಬೆಳೆಯಲು ಹೋದರೆ ಕಾರ್ಮಿಕರು ಸೇರಿದಂತೆ ಇನ್ನಿತರ ಖರ್ಚು ಹೆಚ್ಚಾಗುತ್ತದೆ. ಗೊಬ್ಬರವನ್ನು ತಂಬಾಕು ಸಸಿಗೆ ಸಮತೋಲನದಲ್ಲಿ ನೀಡಬೇಕು. ನಮ್ಮ ಆರೋಗ್ಯದಂತೆ ತಂಬಾಕು ಗಿಡದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅತಿಯಾದ ಗೊಬ್ಬರ ನೀಡಿದರೆ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ. ದನದ ಗೊಬ್ಬರ ಸಿಗದಿದ್ದರೆ ಸೆಣಬು ಬೆಳೆ ಬೆಳೆದು ಭೂಮಿಯ ಫಲವತ್ತತೆಯನ್ನು ರಕ್ಷಣೆ ಮಾಡಬೇಕು ಎಂದರು.
ಮೈಕ್ಯಾಪ್ಸ್ ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಫ್ ಹಸನ್ ಮಾತನಾಡಿ, ನಮ್ಮ ಸಂಸ್ಥೆ ಮತ್ತು ತಂಬಾಕು ಮಂಡಳಿ ವತಿಯಿಂದ ಆರೋಗ್ಯ ಶಿಬಿರವನ್ನು ರೈತರು ಹಾಗೂ ಜನರಿಗಾಗಿ ಆಯೋಜನೆ ಮಾಡುವ ಮೂಲಕ ರೈತ ಪರ ಕೆಲಸ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಸುಬ್ಬರಾವ್ ಹಾಗೂ ಹರಾಜು ಅಧೀಕ್ಷಕ ರಾಮ್ ಮೋಹನ್ ಸೂರಿ ರೈತರಿಗೆ ತಂಬಾಕು ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಆರೋಗ್ಯ ಪರೀಕ್ಷೆ: ಶಿಬಿರದಲ್ಲಿ ಡಯಾಬಿಟಿಸ್, ಬ್ಲಡ್ ಪ್ರೆಷರ್, ಕಣ್ಣಿನ ಪರೀಕ್ಷೆ ಸೇರಿದಂತೆ ದೇಹದ ಇನ್ನಿತರೆ ಆರೋಗ್ಯದ ಬಗ್ಗೆ ನೋಂದಣಿಯಾಗಿದ್ದ ಜನರಿಗೆ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಡೆಕನ್ ಕಂಪನಿಯ ಮ್ಯಾನೇಜರ್ ಪಾಷ, ಚಿಕ್ಕನೇರಳೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ್, ಗ್ರಾಮದ ಯಜಮಾನ ಗೋವಿಂದೇಗೌಡ, ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಮತ್ತಿತರರಿದ್ದರು.