ನದಿಗಳನ್ನು ರಕ್ಷಿಸಿ; ಮಾಲಿನ್ಯದಿಂದ ಮುಕ್ತಗೊಳಿಸಲು ವಿಶೇಷ ಯೋಜನೆ ಜಾರಿ ಅಗತ್ಯ

River
Published on

ರಾಜ್ಯದ ಹನ್ನೆರಡು ನದಿಗಳ ನೀರು ಮಲಿನವಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ. ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ತುಂಗಾ, ಕಾವೇರಿ, ಕಬಿನಿ, ಕಾಗಿಣಾ, ಕೃಷ್ಣಾ, ಶಿಂಷಾ ಭೀಮಾ, ನೇತ್ರಾವತಿ ಹಾಗೂ ದಕ್ಷಿಣ ಪಿನಾಕಿನಿ ನದಿಗಳು ಈ ಪಟ್ಟಿಯಲ್ಲಿವೆ. ನಿಜಕ್ಕೂ ಇದು ಗಂಭೀರವಾದ ವಿಚಾರ. ಇತರ ರಾಜ್ಯಗಳು ನದಿಗಳು ಸೇರಿದಂತೆ ಇತರ ಜಲಮೂಲಗಳನ್ನು ರಕ್ಷಿಸಿಕೊಳ್ಳಲು ವಿಶೇಷ ಕ್ರಿಯಾಯೋಜನೆ ರೂಪಿಸಿ, ಅದನ್ನು ಜಾರಿಮಾಡುತ್ತಿವೆ. ಹೂಳು ತೆಗೆದು, ನದಿ ಮತ್ತು ತೀರ ಪ್ರದೇಶವನ್ನು ಪ್ಲಾಸ್ಟಿಕ್​ವುುಕ್ತಗೊಳಿಸುತ್ತಿವೆ. ಜಲಜಾಗೃತಿ ಬಗ್ಗೆ ಜನಜಾಗೃತಿ ಹೆಚ್ಚುತ್ತಿರುವ ಹೊತ್ತಲ್ಲಿ ನಮ್ಮಲ್ಲಿ ಪ್ರಮುಖ ನದಿಗಳ ನೀರು ಮಲಿನವಾಗಿರುವುದು ಶೋಚನೀಯ.

ಅಭಿವೃದ್ಧಿ ಅಥವಾ ಕೈಗಾರೀಕರಣದ ಭರಾಟೆಯಲ್ಲಿ ನದಿಗಳ ಒಡಲನ್ನು ಹೀಗೆ ಕಲುಷಿತಗೊಳಿಸಿದರೆ ಮುಂಬರುವ ದಿನಗಳು ಘೋರವಾಗಿ ಕಾಡಬಹುದು. ಕೈಗಾರಿಕೆಗಳ ತ್ಯಾಜ್ಯ, ರಾಸಾಯನಿಕಯುಕ್ತ ನೀರು ನದಿಗಳಿಗೆ ಬಿಡದಂತೆ ನಿಯಮಾವಳಿಗಳನ್ನು ರೂಪಿಸಲಾಗಿದ್ದರೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕಳೆದ ವರ್ಷ (2023) ಭೀಕರ ಬರದ ಸಂದರ್ಭದಲ್ಲಿ ರಾಜ್ಯ ಎದುರಿಸಿದ ಜಲಕ್ಷಾಮದ ತಲ್ಲಣ ಎಲ್ಲರಿಗೂ ಗೊತ್ತಿರುವಂಥದ್ದೇ. ರಾಜಧಾನಿ ಬೆಂಗಳೂರು ಹನಿನೀರಿಗಾಗಿ ಪರಿತಪಿಸುವಂತಾಗಿ, ಉದ್ಯಮಗಳ ವಲಸೆ ಕೂಡ ಆರಂಭವಾಗಿತ್ತು. ಜಲಮೂಲಗಳ ರಕ್ಷಣೆಯಲ್ಲಿ ತೋರಿದ ನಿರ್ಲಕ್ಷ್ಯದ ಫಲವೇ ಇದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2022ರ ತನ್ನ ವರದಿಯಲ್ಲಿ ಕಾವೇರಿ ಸೇರಿದಂತೆ ರಾಜ್ಯದ 17 ನದಿಗಳ ನೀರು ಬಳಕೆಗೆ ಯೋಗ್ಯವಲ್ಲ ಎಂದು ಹೇಳಿತ್ತು. ಅದಾದ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್​ಪಿಸಿಬಿ) ಅಧಿಕಾರಿಗಳು 2023ರ ಜನವರಿಯಲ್ಲಿ 17 ನದಿಗಳ ನೀರಿನ ಮಾದರಿಯನ್ನು ಸಂಗ್ರಹಿಸಿದ್ದರು. ಆದರೆ, ಆ ಬಳಿಕ ಪರಿಸ್ಥಿತಿ ಸುಧಾರಣೆಗೆ ಏನು ಮಾಡಲಾಯಿತು ಎಂಬುದು ಬಹಿರಂಗಗೊಂಡಿಲ್ಲ. ಆದರೆ, ಕಳೆದ ಐದಾರು ವರ್ಷಗಳಿಂದ ನದಿಗಳ ನೀರಿನ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ ಮತ್ತು ಇದು ಸ್ವಾಭಾವಿಕವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ ಎನ್ನುತ್ತಾರೆ ಜಲತಜ್ಞರು.

ರಾಜ್ಯದ ಕೆರೆಗಳ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ. ಸೂಕ್ಷ್ಮ ಜೀವಪರಿಸರವು ಎಲ್ಲ ನದಿಗಳ ಜೀವಾಳ. ಆದರೆ, ಈ ಪರಿಸರಕ್ಕೆ ಧಕ್ಕೆ ಒದಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳಿಗೆ ಮಿತಿ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾವ ತಂತ್ರಜ್ಞಾನದ ನೆರವಿನಿಂದಲೂ ಇವನ್ನು ವೃದ್ಧಿಸಲು ಸಾಧ್ಯವಿಲ್ಲ. ಹೀಗಾಗಿ, ನದಿ ಸೇರಿದಂತೆ ಜಲಮೂಲಗಳ ರಕ್ಷಣೆಗೆ ವೈಜ್ಞಾನಿಕ ಕ್ರಮಗಳನ್ನು ಬಳಸಬೇಕು ಮತ್ತು ಮಲಿನ ನೀರು ನದಿಗಳ ಒಡಲಿಗೆ ಸೇರ್ಪಡೆ ಆಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ನದಿಗಳ ಜೀವಪರಿಸರವನ್ನು ರಕ್ಷಿಸಲು ಕಾಳಜಿ ವಹಿಸಬೇಕು. ನದಿಗಳ ರಕ್ಷಣೆಯ ಬಗ್ಗೆ ಸ್ಪಷ್ಟವಾದ ನೀತಿ ಜಾರಿಗೆ ಬರಬೇಕು. ನದಿಗಳು ಈ ಸ್ಥಿತಿಗೆ ಏಕೆ ತಲುಪಿವೆ ಎಂದು ಸರ್ಕಾರ ಮತ್ತು ಜನಸಾಮಾನ್ಯರು ಪ್ರಶ್ನಿಸಿಕೊಂಡು, ಅವಲೋಕನಕ್ಕೆ ಮುಂದಾದರೆ ಉತ್ತರ ಸಿಗುವುದು ಕಷ್ಟವೇನಲ್ಲ. ನದಿಗಳ ದಾರುಣ ದನಿಯನ್ನು ನಿರ್ಲಕ್ಷಿಸಿದರೆ ಮನುಕುಲಕ್ಕೆ ಉಳಿಯುವುದು ಕಣ್ಣೀರು ಮಾತ್ರ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಇನ್ನಾದರೂ, ನದಿಗಳ ರಕ್ಷಣೆಗೆ ಪ್ರಭುತ್ವದ ಇಚ್ಛಾಶಕ್ತಿ ಜಾಗೃತಗೊಳ್ಳಲಿ ಎಂದು ಆಶಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net