ಸ್ವಯಂಪ್ರೇರಿತ ವೇಶ್ಯಾವೃತ್ತಿ ಕಾನೂನುಬದ್ಧ ಎಂದ ಸುಪ್ರೀಂಕೋರ್ಟ್; ಪೊಲೀಸರು ಕೇಸ್​ ದಾಖಲಿಸುವಂತಿಲ್ಲ..

supreme court
supreme court
Published on

ನವದೆಹಲಿ: ಇಂದು ಸುಪ್ರೀಂಕೋರ್ಟ್​ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಸ್ವಯಂಪ್ರೇರಿತ ವೇಶ್ಯಾವೃತ್ತಿ ಕಾನೂನುಬದ್ಧ ಎಂದು ಹೇಳಿರುವುದಷ್ಟೇ ಅಲ್ಲದೆ ವೇಶ್ಯೆಯರನ್ನೂ ಗೌರವದಿಂದ ನೋಡಬೇಕು ಎಂಬುದಾಗಿ ತಿಳಿಸಿದೆ.

ಸ್ವ-ಇಚ್ಛೆಯ ವೇಶ್ಯಾವೃತ್ತಿ ಕಾನೂನುಸಮ್ಮತ, ಪೊಲೀಸರು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಹಾಗಿಲ್ಲ ಮತ್ತು ವೇಶ್ಯೆಯರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಹಾಗಿಲ್ಲ. ಅಲ್ಲದೆ ವೇಶ್ಯೆಯರನ್ನು ಘನತೆಯಿಂದ ನೋಡಬೇಕು. ಅದೂ ಒಂದು ವೃತ್ತಿ ಆಗಿರುವುದರಿಂದ ಅವರಿಗೂ ಕಾನೂನಿನಡಿ ಸಮನಾದ ಘನತೆ ಹಾಗೂ ರಕ್ಷಣೆ ಇದೆ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ತ್ರಿಪೀಠ ಸದಸ್ಯ ಇಂಥದ್ದೊಂದು ಆದೇಶ ನೀಡಿದೆ. ವೇಶ್ಯಾವೃತ್ತಿ ಕಾನೂನುಬದ್ಧ, ಕಾನೂನಿನಡಿ ಸಿಗುವ ಎಲ್ಲ ರಕ್ಷಣೆ ವೇಶ್ಯೆಯರಿಗೂ ಲಭ್ಯ. ಆದರೆ ವಯಸ್ಸು ಹಾಗೂ ಒಪ್ಪಿಗೆ ಸಂಬಂಧಿಸಿದಂತೆ ಮಾತ್ರ ಕ್ರಿಮಿನಲ್ ಕೇಸು ದಾಖಲಿಸಲು ಅವಕಾಶವಿದೆ. ವೇಶ್ಯೆ ವಯಸ್ಕಳಾಗಿದ್ದು, ಸ್ವ-ಇಚ್ಛೆಯಿಂದ ಅದರಲ್ಲಿ ತೊಡಗಿಕೊಂಡಿರುವುದು ಸ್ಪಷ್ಟವಾಗಿದ್ದಲ್ಲಿ ಆಗ ಪೊಲೀಸರು ಮಧ್ಯಪ್ರವೇಶ ಮಾಡುವ ಹಾಗಿಲ್ಲ. ಅಲ್ಲದೆ ಅದನ್ನು ಅಕ್ರಮ ಎಂದು ಹೇಳುವಂತಿಲ್ಲ. ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರ ದೇಶದ ಪ್ರತಿಯೊಬ್ಬನಿಗೂ ಘನತೆಯ ಜೀವನದ ಹಕ್ಕು ಇದೆ ಎಂದು ಪೀಠ ಹೇಳಿದೆ.

ಅಲ್ಲದೆ ಲೈಂಗಿಕ ಚಟುವಟಿಕೆ ನಡೆಯುವ ಸ್ಥಳಗಳ ಮೇಲೆ ಪೊಲೀಸರು ದಾಳಿ ಮಾಡಿ ವೇಶ್ಯೆಯರನ್ನು ಬಂಧಿಸುವಂತಿಲ್ಲ, ಅವರನ್ನು ಶೋಷಣೆಗೆ ಒಳಪಡಿಸುವಂತಿಲ್ಲ, ಆರೋಪ ಹೊರಿಸುವಂತಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ಸ್ವ-ಇಚ್ಛೆಯ ವೇಶ್ಯಾವೃತ್ತಿ ಅಪರಾಧವಲ್ಲ. ಆದರೆ ವೇಶ್ಯಾವಾಟಿಕೆಯನ್ನು ನಡೆಸುವುದು ಕಾನೂನುಬಾಹಿರ ಎಂದು ಹೇಳಿದೆ.

ತಾಯಿ ವೇಶ್ಯೆ ಎಂಬ ಒಂದೇ ಕಾರಣಕ್ಕೆ ಆಕೆಯ ಮಕ್ಕಳನ್ನು ಅವಳಿಂದ ದೂರ ಮಾಡುವ ಹಾಗಿಲ್ಲ. ಜತೆಗೆ ವೇಶ್ಯೆಯರೊಂದಿಗೆ ಇರುವ ಮಕ್ಕಳನ್ನು ಮಾನವ ಕಳ್ಳಸಾಗಣಿಕೆ ಎಂದು ಪರಿಗಣಿಸುವ ಹಾಗಿಲ್ಲ ಎಂದೂ ಆದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ ವೇಶ್ಯೆಯರು ದೂರು ನೀಡಿದರೆ ಪೊಲೀಸರು ತಾರತಮ್ಯ ಮಾಡುವಂತಿಲ್ಲ ಎಂದೂ ಪೀಠ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net