ರಾತ್ರಿ ಪೂರ್ತಿ ಡಿಜೆ ಹಾಕಿ ಡ್ಯಾನ್ಸ್ ಮಾಡಿ, ನಾನಿದ್ದೇನೆ..; ಮುಸ್ಲಿಮರನ್ನು ಓಲೈಸಲು ಬಿಜೆಪಿ ಶಾಸಕರ ಅತಿರೇಕದ ಹೇಳಿಕೆಗಳು...

1281316
Published on

ಬೀದರ್​: ರಾಜ್ಯದಲ್ಲಿ ನಾನಾ ಕಾರಣಕ್ಕಾಗಿ ಹಿಂದು-ಮುಸ್ಲಿಂ ನಡುವೆ ಆಗಾಗ ಸಂಘರ್ಷ ನಡೆಯುತ್ತಿರುವ ಬೆನ್ನಿಗೇ ಬಿಜೆಪಿ ಶಾಸಕರೊಬ್ಬರು ಮುಸ್ಲಿಮರನ್ನು ಓಲೈಸಿ ಹಿಂದುಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮಾತ್ರವಲ್ಲ, ಕಾನೂನು ಹಾಗೂ ಸರ್ಕಾರ ಆದೇಶವನ್ನೂ ಮೀರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಎರಡು ದಿನಗಳ ಹಿಂದಷ್ಟೇ ಮುಸ್ಲಿಮರ ಉರುಸ್ ಕಾರ್ಯಕ್ರಮ ಏರ್ಪಾಟಾಗಿತ್ತು. ಅಲ್ಲಿ ಸ್ಥಳೀಯ ಬಿಜೆಪಿ ಶಾಸಕ ಶರಣು ಸಲಗರ್ ಅತಿಥಿಯಾಗಿ ಭಾಗವಹಿಸಿದ್ದರು. ಆಗ ಭಾಷಣ ಮಾಡಿರುವ ಶಾಸಕ ಸಲಗರ್, ಮುಸ್ಲಿಮರನ್ನು ಮನಸೋಇಚ್ಛೆ ಓಲೈಸಿದ್ದಾರೆ.

ರಾತ್ರಿ ಡಿಜೆ ಹಚ್ಚಲು ಪೊಲೀಸರು ನಿಮಗೆ ಅನುಮತಿ ನಿರಾಕರಿಸಿರಬಹುದು. ಆದರೆ ನಾನು ಹೇಳ್ತೇನೆ, ನೀವು ರಾತ್ರಿ ಪೂರ್ತಿ ಡಿಜೆ ಹಚ್ಚಿ ಡಾನ್ಸ್ ಮಾಡಿ. ಯಾರು ಕೇಳುತ್ತಾರೋ ನಾನು ನೋಡುತ್ತೇನೆ. ಪೊಲೀಸರು ಕೇಸ್ ಹಾಕುವುದಾದರೆ ಮೊದಲು ನನ್ನ ಮೇಲೆ ಹಾಕಲಿ ಎಂದು ಶಾಸಕರು ಹೇಳಿದಾಗ, ಅಲ್ಲಿ ನೆರೆದಿದ್ದ ಮುಸ್ಲಿಮರು ಶಿಳ್ಳೆ-ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಅದನ್ನು ಎಲ್ಲ ಧರ್ಮೀಯರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರವೇ ಇತ್ತೀಚೆಗೆ ಆದೇಶ ಹೊರಡಿಸಿದೆ. ಆದರೂ ಅದನ್ನು ಉಲ್ಲಂಘಿಸಲು ಬಿಜೆಪಿ ಶಾಸಕರೇ ಕುಮ್ಮಕ್ಕು ನೀಡಿರುವುದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ.

ನೀವು ರಾತ್ರಿ ಪೂರ್ತಿ ಡ್ಯಾನ್ಸ್ ಮಾಡಿ, ಬೇಕಿದ್ದರೆ ನಿಮ್ಮೊಂದಿಗೆ ನಾನೂ ಡಾನ್ಸ್ ಮಾಡುತ್ತೇನೆ ಎಂದ ಶಾಸಕ ಶರಣು ಸಲಗರ್, ಉರುಸ್‌ನಲ್ಲಿ ಭಾಗವಹಿಸಿದ್ದ ಮುಸ್ಲಿಮರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಶಾಸಕರು ರಾತ್ರಿ ಪೂರ್ತಿ ಡಿಜೆ ಹಚ್ಚುವುದಕ್ಕೆ ಕುಮ್ಮಕ್ಕು ನೀಡಿರುವುದು, ಸುಪ್ರೀಂ ಕೋರ್ಟ್ ಆದೇಶ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಮಾಡಿದ್ದಲ್ಲದೆ, ಮುಸ್ಲಿಮರ ಜತೆ ಸೇರಿ ಡಾನ್ಸ್ ಮಾಡಿರುವುದು, ಅವರನ್ನು ಓಲೈಸುವಂತಹ ಮಾತುಗಳನ್ನಾಡಿರುವುದು ಸರಿಯಲ್ಲ. ಅವರಿಗೆ ಮುಂದಿನ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಆಂದೋಲಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net