More

    ಅಶ್ಲೀಲ ವಿಡಿಯೋ ಪ್ರಕರಣ:ಮೇ 30ರಂದು ಹಾಸನ ಚಲೋ ಅಭಿಯಾನ

    ಹಾಸನ : ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಕಷ್ಟದ ಕೆಲಸವಲ್ಲ.ಪ್ರತಿ ಕ್ಷಣದ ಚಲನವಲನ ಕೇಂದ್ರ ಗೃಹ ಇಲಾಖೆಗೆ ತಿಳಿಯುತ್ತದೆ. ಆದರೆ ಉದ್ದೇಶಪೂರ್ವಕವಾಗಿಯೇ ಅವರನ್ನು ವಿದೇಶದಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್ ಆರೋಪಿಸಿದರು.
    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಜಿಲ್ಲಾ ಜನಪರ ಸಂಘಟನೆಗಳಿಂದ ಆಯೋಜಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು,ಪ್ರಜ್ವಲ್ ರೇವಣ್ಣನ್ನು ದೇಶಕ್ಕೆ ಕರೆಸುವುದು ಕೇಂದ್ರ ಕಷ್ಟವಲ್ಲ. ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸಿದರೆ, ಎಲ್ಲಿದ್ದರೂ ಪ್ರಜ್ವಲ್ ಬರಲೇಬೇಕು. ಆದರೆ ಇದನ್ನು ಮಾಡದೆ ಕೇಂದ್ರ ಸರ್ಕಾರ ಆತನಿಗೆ ಸಹಾರ ನೀಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ದೂರಿದರು.
    ಸಂಸದ ಪ್ರಜ್ವಲ್ ರೇವಣ್ಣ ಅವರ ವಿಚಾರದಲ್ಲಿ ಜನಪರ ಒಕ್ಕೂಟ ನಡೆಸುತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ಮುಂದುವರಿಯಬೇಕು. ಆರಂಭ ಶೂರತ್ವ ತೋರಿಸದೆ ಕೊನೆಯವರೆಗೆ ಎಲ್ಲರೂ ಸಂತ್ರಸ್ತ ಮಹಿಳೆಯರ ಪರ ನಿಲ್ಲಬೇಕು. ಇದು ಕೇವಲ ಹಾಸನ ಜಿಲ್ಲೆಗೆ ಸೀಮಿತವಾದ ಸಮಸ್ಯೆಯಲ್ಲ. ಅಧಿಕಾರ, ಹಣ ಬಲಕ್ಕೆ ಸಿಲುಕಿ ಎಲ್ಲಾ ಕಡೆಯೂ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
    ಸಾಹಿತಿ ರೂಪ ಹಾಸನ ಅವರು ಮಾತನಾಡಿ, ಹಾಸನದಲ್ಲಿ ನಡೆದಿರುವುದು ಕೇವಲ ಲೈಂಗಿಕ ಅತ್ಯಾಚಾರವಲ್ಲ ಇದು ಲೈಂಗಿಕ ಹತ್ಯಾಕಾಂಡವಾಗಿದೆ. ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ ನೂರಾರು ಮಹಿಳೆಯರ ಕುಟುಂಬವನ್ನು ಬೀದಿಗೆ ತಂದಿದ್ದಾನೆ. ಆತನಿಗೆ ರಕ್ಷಣೆ ನೀಡುತ್ತಿರುವುದು ಬೇಸರ ತರಿಸಿದೆ ಎಂದರು.
    ಪೆನ್ ಡ್ರೈವ್ ಪ್ರಕರಣದಲ್ಲಿ ರಾಜಕೀಯ ನಾಯಕರು ಸ್ವಾರ್ಥ ಸಾಧನೆಗಾಗಿ ಮಹಿಳೆರ ಮಾನ ಹರಾಜು ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಡಿಯೋ ಹರಿಬಿಟ್ಟಿರುವುದು ಸ್ವಾರ್ಥಕ್ಕಾಗಿಯೇ ಎಂಬುದು ಎಲ್ಲರಿಗೂ ಗೊತ್ತಿದೆ. ವಿಡಿಯೋ ರೆಕಾರ್ಡ್ ಮಾಡಿದ್ದು ಎಷ್ಟು ತಪ್ಪೋ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಅಷ್ಟೇ ತಪ್ಪು. ಆದ್ದರಿಂದ ಎಲ್ಲರಿಗೂ ಶಿಕ್ಷೆ ಆಗಲೇಬೇಕೆಂದರು.
    ಮೊದಲೆಲ್ಲ ಮಹಿಳಾ ಸಮಾನತೆಗಾಗಿ ಹೋರಾಟ ನಡೆಯುತ್ತಿತ್ತು. ಈಗ ಮಹಿಳೆಯರ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪೈಶಾಚಿಕ ಕೃತ್ಯಗಳು ಮರುಕಳಿಸಬಾರದೆಂದರೆ ನಾವೆಲ್ಲರೂ ಒಟ್ಟಾಗಿ ಹೋರಾಡಲೇಬೇಕಿದೆ ಎಂದರು.
    ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನಪರ ಹೋರಟಗಾರರಾದ ಡಾ.ಮೀನಾಕ್ಷಿ ಬಾಳಿ, ಸತ್ಯ, ಪ್ರಭಾ, ಸಿಐಟಿಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ, ಮಲೆನಾಟು ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ಕುಮಾರ್ ಇತರರು ಮಾತನಾಡಿದರು.
    ದಲಿತ ಮುಖಂಡ ಎಚ್.ಕೆ.ಸಂದೇಶ್, ಸೋಮಶೇಖರ್, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ಮುನೀರ್ ಕಾಟಿಪಾಳ್ಯ, ಮಮತಾ ಶಿವು, ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ಸುವರ್ಣಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಹೆಚ್.ಆರ್.ನವೀನ್‌ಕುಮಾರ್, ಎಂ.ಜಿ.ಪೃಥ್ವಿ ಮತ್ತಿತರರಿದ್ದರು.

    ಮೇ 30ರಂದು ಹಾಸನ ಚಲೋ ಅಭಿಯಾನ :
    ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಮೇ 30ರಂದು ಹಾಸನ ಚಲೋ ಅಭಿಯಾನ ನಡೆಸಲು ಜಿಲ್ಲಾ ಜನಪರ ಸಂಘಟನೆಗಳಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    ಹಾಸನದಲ್ಲಿ ನಡೆಯುವ ಅಭಿಯಾನದಲ್ಲಿ 10 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲೂ ಕರಪತ್ರ ವಿತರಣೆ, ಸುದ್ದಿಗೋಷ್ಠಿ ನಡೆಸಿ ಹಾಸನ ಜಿಲ್ಲೆಯ ನೂರಾರು ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯದ ಕುರಿತು ಮಾಹಿತಿ ನೀಡಬೇಕು. ಮೇ 30ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಮನವಿ ಪತ್ರ ಸ್ವೀಕರಿಸುವಂತೆ ಮಾಡುವುದು ಹಾಸನ ಚಲೋ ಅಭಿಯಾನದ ಉದ್ದೇಶವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

    ಬಿ.ಕೆ.ಸಿಂಗ್ ದಕ್ಷ ಅಧಿಕಾರಿ:
    ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದು, ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಸ್‌ಐಟಿಗೆ ನೈತಿಕ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಹಿರಿಯ ಅಧಿಕಾರಿ ಬಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಬಳ್ಳಾರಿ ಗಣಿಧನಿಗಳ ಕೇಸ್ ಹಾಗು ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಂಗ್ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಇಲ್ಲಿಯೂ ಅವರು ನೊಂದವರಿಗೆ ನ್ಯಾಯ ಕಲ್ಪಿಸುತ್ತಾರೆಂಬ ವಿಶ್ವಾಸವಿದೆ. ರಾಜ್ಯ ಸರ್ಕಾರ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ತರು ಹಾಗು ಸಾಕ್ಷಿಗಳ ಗೌಪ್ಯತೆ ಕಾಪಾಡುವುದು ಮುಖ್ಯವಾಗುತ್ತದೆ ಸಭೆಯಲ್ಲಿ ಚರ್ಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts