ಆಸ್ತಿ ನೋಂದಣಿ ಇನ್ನಷ್ಟು ಭಾರ

SUBREgistr
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಸ್ಥಿರಾಸ್ಥಿಗಳ ನೋಂದಣಿ ಶುಲ್ಕ ಭಾನುವಾರದಿಂದ ಶೇ. 1ರಷ್ಟು ಹೆಚ್ಚಲಿದ್ದು, ಇದರಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 2500 ಕೋಟಿ ರೂ. ಆದಾಯವನ್ನು ರಾಜ್ಯ ಸರ್ಕಾರ ನಿರೀಕ್ಷಿಸುತ್ತಿದೆ. ಅಷ್ಟೇ ಅಲ್ಲ, ಶುಲ್ಕ ಪರಿಷ್ಕರಣೆ ಬಳಿಕ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಸ್ಥಿರಾಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಟ್ಟಿಯಲ್ಲಿ ಕರ್ನಾಟಕ 3ನೇ ದುಬಾರಿ ರಾಜ್ಯವಾಗಿ ಹೊರಹೊಮ್ಮಿದೆ. ಸದ್ಯ ಕೇರಳದಲ್ಲಿ ಶೇ.10 , ತಮಿಳುನಾಡಿನಲ್ಲಿ ಶೇ.9ರಷ್ಟು ನೋಂದಣಿ ಶುಲ್ಕ ಇದೆ. ಪರಿಷ್ಕರಣೆಗೊಂಡ ಬಳಿಕ ರಾಜ್ಯದಲ್ಲಿ ನೋಂದಣಿ ಶುಲ್ಕ ಶೇ.7.65ಕ್ಕೆ ತಲುಪಿದೆ.

2024-25ನೇ ಸಾಲಿನಲ್ಲಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 26 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಲಾಗಿತ್ತು. ಈ ಪೈಕಿ 22,500 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ 2025-26ನೇ ಸಾಲಿನಲ್ಲಿ 28 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಿದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ 5,505 ಕೋಟಿ ರೂ. ಸಂಗ್ರಹವಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.1.68 ಇಳಿಕೆ ಆದಾಯ ಸಂಗ್ರಹದಲ್ಲಿ ಇಳಿಕೆಯಾಗಿದೆ.

ರಾಜಸ್ವದಲ್ಲೂ ಇಳಿಕೆ

ಕಳೆದ ಆರ್ಥಿಕ ವರ್ಷದಲ್ಲಿ 3,500 ಕೋಟಿ ರೂ. ಕಡಿಮೆ ಸಂಗ್ರಹವಾಗಿತ್ತು. ಈ ಬಾರಿಯೂ ರಾಜಸ್ವ ಸಂಗ್ರಹದಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ. ಆದರೆ, ನೋಂದಣಿ ಶುಲ್ಕ ಶೇ.1 ರಿಂದ 2ಕ್ಕೆ ಏರಿಕೆ ಮಾಡಿರುವ ಮಾಡಿರುವ ಪರಿಣಾಮ ಆದಾಯ ಸಂಗ್ರಹದಲ್ಲಿ ಏರಿಕೆ ಆಗುವ ಸಾಧ್ಯತೆಗಳಿವೆ.

ಸ್ಥಿರಾಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಟ್ಟಿಯಲ್ಲಿ ಕರ್ನಾಟಕ ಇದುವರೆಗೆ ದಕ್ಷಿಣದ ರಾಜ್ಯಗಳಲ್ಲೇ ಅತ್ಯಂತ ಕಡಿಮೆ (ಶೇ. 6.5) ಶುಲ್ಕ ಸಂಗ್ರಹಿಸುವ ರಾಜ್ಯವಾಗಿತ್ತು. ಆದರೆ, ನೋಂದಣಿ ಶುಲ್ಕ ಶೇ. 1ರಷ್ಟು ಏರಿಸಿದ ಬಳಿಕ ಶೇ. 7.65 ಶುಲ್ಕದೊಂದಿಗೆ ಆಂಧ್ರ ಮತ್ತು ತೆಲಂಗಾಣ (ತಲಾ ಶೇ. 7.5) ರಾಜ್ಯಗಳನ್ನು ಹಿಂದಿಕ್ಕಿ 3ನೇ ದುಬಾರಿ ರಾಜ್ಯವೆನಿಸಿದೆ. ಕೇರಳ ಶೇ.10 ಮತ್ತು ತಮಿಳುನಾಡು ಶೇ.9 ಅತೀ ಹೆಚ್ಚು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಿಸುವ ಅಗ್ರ ಎರಡು ರಾಜ್ಯಗಳಾಗಿವೆ.

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಏರಿಕೆ ಆಗಿತ್ತು. ಪರಿಣಾಮ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವೂ ಹೆಚ್ಚಾಗಿತ್ತು. ಇದಾದ ಮೇಲೆ ಮುದ್ರಾಂಕ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ 23 ವರ್ಷಗಳ ಬಳಿಕ ನೋಂದಣಿ ಶುಲ್ಕ ಏರಿಕೆ ಆಗಿದೆ.

ಈ ಎಲ್ಲದಕ್ಕೂ ಅನ್ವಯ

ಕ್ರಯ ಪತ್ರ/ಸಾಗಣೆ ಪತ್ರ, ಜಿಪಿಎಯಿಂದ ಜೆಡಿಎ, ಜಿಪಿಎ (ಕುಟುಂಬದ ಹೊರಗೆ), ಸಾಧೀನ ಸಹಿತ ಕರಾರು ಪತ್ರ, ಹಕ್ಕು ಬಿಡುಗಡೆ ಪತ್ರ (ಕುಟುಂಬದ ಹೊರಗೆ), ಗ್‌ಟಿ ಡೀಡ್ (ಕುಟುಂಬದ ಹೊರಗೆ), ಒಪ್ಪಂದ ಪತ್ರ (ಕುಟುಂಬದ ಹೊರಗೆ), ಗುತ್ತಿಗೆ (30 ವರ್ಷ ಮೇಲ್ಪಟ್ಟ), ಗಣಿ ಗುತ್ತಿಗೆ, ಡಿಕ್ಲರೇಷನ್ ಆ್ ಟ್ರಸ್ಟ್, ಪಾಲುದಾರಿಕೆ ಪತ್ರ, ನಿಯೋಜನೆ ಒಪ್ಪಂದ, ಅವಾರ್ಡ್ ಮತ್ತು ವರ್ಗಾವಣೆ ಪತ್ರ ರಿಜಿಸ್ಟ್ರೇಷನ್ ವೇಳೆ ಪರಿಷ್ಕೃತ ನೋಂದಣಿ ಶೇ.2 ಪಾವತಿ ಅನ್ವಯ ಆಗಲಿದೆ.

ನೆರೆಯ ರಾಜ್ಯಗಳ ನೋಂದಣಿ, ಮುದ್ರಾಂಕ ಶುಲ್ಕ

(ಶೇಕಡಾವಾರು)

-------------------------------------------------------------

ರಾಜ್ಯ        ಮುದ್ರಾಂಕ ಶುಲ್ಕ       ನೋಂದಣಿ ಶುಲ್ಕ    ಇತರೆ ಸೆಸ್        ಒಟ್ಟು

--------------------------------------------------------------

ಕರ್ನಾಟಕ      5                              2                        0.65              7.65

ತಮಿಳುನಾಡು   5                        2                             2                 9

ಕೇರಳ             8                        2                           ಶೂನ್ಯ                 10

ಆಂಧ್ರಪ್ರದೇಶ    5                       1                            1.5                   7.5

ತೆಲಂಗಾಣ(ಗ್ರಾಮೀಣ) 5.5         2                           ಶೂನ್ಯ                  7.5

ತೆಲಂಗಾಣ(ನಗರ)  5.5             0.5                         1.5                      7.5

5 ವರ್ಷದಲ್ಲಿ ಸಂಗ್ರಹವಾದ ನೋಂದಣಿ ಶುಲ್ಕ

(ಕೋಟಿ ರೂ.ನಲ್ಲಿ)

-----------------------------

ವರ್ಷ     ನೋಂದಣಿ ಶುಲ್ಕ ಸಂಗ್ರಹ

---------------------------

2024-    25 3249.95

2023-    24 3226.53

2022-    23 2903.26

2021-    22 2249.87

2020-    21 1779.20

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net