

ಬೆಂಗಳೂರು: ಸೇವಾ ಹಿರಿತನ ಆಧಾರದ ಮೇಲೆ 450 ಸಿಬ್ಬಂದಿಗೆ ಬಡ್ತಿ ಜತೆ ಬಯಸಿದ ಸ್ಥಳಕ್ಕೆ ವರ್ಗಾವಣೆ ಮಾಡುವ ಮೂಲಕ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಇತಿಹಾಸ ಬರೆದಿದೆ.
ನಗರದ ಹಲಸೂರು ಕೆರೆ ಬಳಿಯ ರಾಜ್ಯ ಅಗ್ನಿಶಾಮಕ ದಳದ ಪ್ರಧಾನ ಕಚೇರಿ ಆವರಣದಲ್ಲಿ ಶುಕ್ರವಾರ ಎಲ್‌ಇಡಿ ಪರದೆ ಅಳವಡಿಸಿ ಪೆಂಡಾಲ್ ಹಾಕಿ ಸಿಬ್ಬಂದಿಗೆ ಬಡ್ತಿ ಜತೆಗೆ ಸಾಮೂಹಿಕ ವರ್ಗಾವಣೆ ಮಾಡುವ ಮೂಲಕ ಅಗ್ನಿಶಾಮಕ ದಳದ ಡಿಜಿಪಿ ಕಮಲ್ ಪಂತ್, ಸಿಬ್ಬಂದಿಗೆ ಅಚ್ಚರಿ ನೀಡಿದರು. ಶುಕ್ರವಾರ ಕಮಲ್ ಪಂತ್ ಅವರ ಹುಟ್ಟು ಹಬ್ಬವಾಗಿತ್ತು. ಜೂನ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಇದರ ನಡುವೆ ಇಲಾಖೆಯಲ್ಲಿ ಹೊಸ ಇತಿಹಾಸ ಬರೆದರು ಎಂದು ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಗ್ನಿಶಾಮಕದಿಂದ ಪ್ರಮುಖ ಅಗ್ನಿಶಾಮಕ ಹುದ್ದೆಗಳಿಗೆ ಬಡ್ತಿ ಪಡೆದ 450 ಸಿಬ್ಬಂದಿಯನ್ನು ಕ್ರೀಡಾಕೋಟ, ಸೇವಾ ಹಿರಿತನ, ಪತಿ-ಪತ್ನಿ, ಆರೋಗ್ಯ ಸಮಸ್ಯೆ ಇನ್ನಿತ್ತರ ಗ್ರೌಂಡ್ಸ್ ಆಧಾರದ ಮೇಲೆ ತಾವು ಇಚ್ಛಿಸಿದ ಸ್ಥಳಗಳಿಗೆ ನಿಯೋಜಿಸಿ ವರ್ಗಾವಣೆ ಮಾಡುವ ಮಾಡಿದರು. ಡಿಜಿಪಿ ಕಮಲ್ ಪಂತ್ ಅವರ ದಿಟ್ಟ ನಿರ್ಧರದಿಂದ ಸಿಬ್ಬಂದಿಯಲ್ಲಿ ಸಂತಸ ಮನೆ ಮಾಡಿತ್ತು.
ಒಂದೆಡೆಯಿಂದ ಮತ್ತೊಂದೆಡೆ ವರ್ಗಾವಣೆ ಮಾಡಿಸಿಕೊಳ್ಳಲು 1ರಿಂದ 2 ಲಕ್ಷ ರೂ. ವರೆಗೂ ಲಂಚ ಆಮಿಷ ಒಡ್ಡಿ ಕೆಲವರು ಶಿಫಾರಸ್ಸು ಪತ್ರ ಮತ್ತು ಕರೆಗಳನ್ನು ಮಾಡಿಸುತ್ತಿದ್ದ ಆರೋಪಗಳು ಕೇಳಿಬಂದಿದ್ದವು. ಇದರಿಂದ ಎಚ್ಚೆತ್ತ ಕಮಲ್ ಪಂತ್, ಪಾದರ್ಶಕವಾಗಿ ಬಡ್ತಿ ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂತೆಯೇ ಇಲಾಖೆಯ ಕೇಂದ್ರ ಕಚೇರಿಗೆ ಅಗ್ನಿಶಾಮಕದಿಂದ ಪ್ರಮುಖ ಅಗ್ನಿಶಾಮಕ ಹುದ್ದೆಗೆ ಮುಂಬಡ್ತಿ ಪಟ್ಟಿಯಲ್ಲಿದ್ದ ಸಿಬ್ಬಂದಿ ಅಧಿಕಾರಿಗಳು ಕರೆಸಿದರು. ಕವಾಯತ್ ಮೈದಾನದಲ್ಲಿ ಪೆಂಡಾಲ್ ಹಾಕಿಸಿ ದೊಡ್ಡ ಎಲ್‌ಇಡಿ ಪರದೆ ಅಳವಡಿಸಿದರು.
ಒಂದು ಪರದೆ ಮೇಲೆ ಬಡ್ತಿ ಪಡೆದು ವರ್ಗಾವಣೆ ಪಟ್ಟಿ ಬರುತ್ತಿದ್ದರೆ ಮತ್ತೊಂದು ಪರದೆ ಮೇಲೆ ಖಾಲಿ ಹುದ್ದೆ ತೋರಿಸುತ್ತಿತ್ತು. ಎಲ್ಲರ ಮುಂದೆಯೇ ಬಹಿರಂಗವಾಗಿ ಬಡ್ತಿ ಹಾಗೂ ವರ್ಗಾವಣೆ ಪ್ರಕ್ರಿಯೆ ನಡೆಸುವ ವ್ಯವಸ್ಥೆಯನ್ನು ಕಲ್ಪಿಸಿದರು. ಇಡೀ ಅಗ್ನಿಶಾಮಕ ಸಿಬ್ಬಂದಿ ಖುಷಿಯಿಂದ ಬಡ್ತಿ ಪಡೆದು ತಮ್ಮ ಹಿರಿತನಕ್ಕೆ ಸಿಕ್ಕ ಸ್ಥಳಕ್ಕೆ ವರ್ಗಾವಣೆ ಪಡೆದರು. ಈ ಪ್ರಕ್ರಿಯೆಯಲ್ಲಿ ಎಡಿಜಿಪಿ ನಂಜುಂಡಸ್ವಾಮಿ, ಡಿಐಜಿ ರವಿ.ಡಿ. ಚನ್ನಣ್ಣನವರ್ ಹಾಗೂ ನಿರ್ದೇಶಕ ಶಿವಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಲಾಬಿ ಕರೆಗಳಿಗೆ ಸೊಪ್ಪು ಹಾಕದ ಡಿಜಿಪಿ:
ಬೆಳಗ್ಗೆ 9 ಗಂಟೆಗೆ ಮೈದಾನಕ್ಕೆ ಬಂದ ಕಮಲ್ ಪಂತ್, ವರ್ಗಾವಣೆ ಮತ್ತು ಬಡ್ತಿ ಪಡೆಯಲು ಮಧ್ಯವರ್ತಿಗಳಿಗೆ ಹಣ ಕೊಟ್ಟು ಕಳೆದುಕೊಳ್ಳಬೇಡಿ. ನೀವು ಬಯಸಿದ ಸ್ಥಳಗಳಲ್ಲಿ ಹುದ್ದೆ ಖಾಲಿ ಇದ್ದರೇ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ವಸೂಲಿ ಅಥವಾ ಲಾಬಿಗೆ ಅವಕಾಶ ಇಲ್ಲವೆಂದು ಕಿವಿಮಾತು ಹೇಳಿದರು. ಇದಾದ ಕೆಲವೇ ತಾಸುಗಳಲ್ಲಿ ಕೆಲವ ಸಿಬ್ಬಂದಿ ಲಾಬಿ ಶುರು ಮಾಡಿದರು. ಶಾಸಕರು, ಸಂಸದರು, ಸಚಿವರ ಕಡೆಯಿಂದ ಡಿಜಿಪಿಗೆ ಕರೆ ಮಾಡಿಸಿದರು. ವಿನಯದಿಂದ ಮನವಿ ಸ್ವೀಕರಿಸಿದ ಕಮಲ್ ಪಂತ್, ಪಾರದರ್ಶಕವಾಗಿ ಪ್ರಕ್ರಿಯೆ ಮುಗಿಸಿ ಸಂಜೆ 6.30ಕ್ಕೆ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಿದರು.
2 ಸಾವಿರ ಕಿ.ಮೀ. ದೂರದಿಂದ ಬಂದು ಸೇವೆ ಸಲ್ಲಿಸಿದ್ದೆನೆ. ನಮ್ಮ ಕುಟುಂಬದಲ್ಲಿ ಸಾವು, ನೋವು ಏನೇ ಆದರೂ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ. ನಿಮ್ಮ ಕಡೆಯಿಂದಲೂ ಇದನ್ನೇ ನಾನು ಬಯಸುತ್ತೆನೆ.
ಕಮಪ್ ಪಂತ್- ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ