ಊರು ಸೇರಿದವರ ಕೈಗೆ ಕೆಲಸ: ಕೃಷಿ ಹಾಗೂ ಕೃಷಿ ಪೂರಕ, ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ

krushi april
Published on

ಬೆಂಗಳೂರು: ಲಾಕ್​ಡೌನ್​ನಿಂದಾಗಿ ನಗರಗಳನ್ನು ತೊರೆದು ಮರಳಿ ಊರು ಸೇರಿರುವ ಲಕ್ಷಾಂತರ ಕೃಷಿಕರು, ಗ್ರಾಮೀಣ ಯುವಜನರ ಕೈಗೆ ಕೆಲಸ ನೀಡಲು ಸಹಕಾರ ಇಲಾಖೆ ಗಂಭೀರ ಚಿಂತನೆ ನಡೆಸಿದ್ದು, ಸ್ಪಷ್ಟ ಕಾರ್ಯಯೋಜನೆಯೊಂದಿಗೆ ಸುತ್ತೋಲೆ ಹೊರಡಿಸುವುದಕ್ಕೆ ಸಿದ್ಧತೆಗಳಾಗುತ್ತಿವೆ. ಆಯಾ ಊರಿನಲ್ಲಿ ಭದ್ರ ನೆಲೆ, ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದಕ್ಕೆ ಪೂರಕವಾಗಿ ಕೃಷಿ ಹಾಗೂ ಕೃಷಿ ಸಂಬಂಧಿತ ಮತ್ತು ಕೃಷಿಯೇತರ ಕಿರು ವ್ಯಾಪಾರ ಅಭಿವೃದ್ಧಿ (ಬಿಡಿಪಿ) ಚಟುವಟಿಕೆಗಳಿಗೆ ಸಾಲದ ರೂಪದಲ್ಲಿ ನೆರವು ನೀಡಲು ಯೋಚಿಸಿದೆ.

ನೆಲೆಯೂರುವವರೇ ಜಾಸ್ತಿ: ಲಾಕ್​ಡೌನ್ ಮುಗಿದ ನಂತರವೂ ಸಹಜ ಸ್ಥಿತಿಗೆ ಬರಲು ಸಾಕಷ್ಟು ಕಾಲಾವಕಾಶ ಹಿಡಿಯುತ್ತದೆ. ಆರ್ಥಿಕತೆ ಚೇತರಿಕೆ ಮೇಲೆ ಮುಂದಿನ ಬೆಳವಣಿಗೆ ಅವಲಂಬಿಸಿದೆ. ಹೀಗಾಗಿ ಸ್ವಂತ ಊರಿಗೆ ಮರಳಿದವರಲ್ಲಿ ಶೇ.10 ಜನರು ಮಾತ್ರ ಮತ್ತೆ ನಗರ, ಮಹಾನಗರಗಳಿಗೆ ಮರಳಬಹುದು ಎಂದು ಅಂದಾಜಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲಿ ಸರಾಸರಿ 50,000 ಜನರು ಸ್ವಂತ ಊರು ಸೇರಿದ್ದು, ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಪ್ರಮಾಣ ಜಾಸ್ತಿ ಇದೆ. ಕೃಷಿ ಸಂಬಂಧಿತ ಕೆಲಸಗಳಿಗೆ ವಿಪುಲ ಅವಕಾಶಗಳಿದ್ದು, ಊರಿಗೆ ಮರಳಿದವರು ಈ ಅವಕಾಶಗಳನ್ನು ಬಳಸುವುದಕ್ಕೆ ಉತ್ತೇಜನ ನೀಡಬೇಕಾಗಿದೆ ಎಂದು ಇಲಾಖೆ ಉನ್ನತ ಮೂಲಗಳು ಹೇಳಿವೆ. ವಾಪಸಾದವರಿಗೆ ಒಂದಿಷ್ಟು ಮಾರ್ಗದರ್ಶನ ಹಾಗೂ ಕೃಷಿ ಇನ್ನಿತರ ಕೆಲಸಗಳಿಗೆ ಒಗ್ಗಿಕೊಳ್ಳುವಂತೆ ಮನಸ್ಥಿತಿ ಬದಲಾವಣೆ ಹಾಗೂ ಪ್ರೇರಣೆ ನೀಡುವುದು ಮುಖ್ಯ. ಇದರಿಂದ ಮಾನವ ಸಂಪನ್ಮೂಲ ಸಂಪೂರ್ಣ ಸದ್ಬಳಕೆಯಾಗಿ ಹಳ್ಳಿಗಳು ಮತ್ತೆ ಎಂದಿನ ಕಳೆ ಪಡೆದುಕೊಳ್ಳುತ್ತವೆ ಎನ್ನುವುದು ಗ್ರಾಮೀಣಾಭಿವೃದ್ಧಿ ಕ್ಷೇತ್ರದ ತಜ್ಞರ ಅಭಿಪ್ರಾಯ. ಜಿಲ್ಲಾ ಸಹಕಾರ ಕೇಂದ್ರ ( ಡಿಸಿಸಿ) ಬ್ಯಾಂಕುಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಪ್ರತಿ ಸಂಘಕ್ಕೆ ತಲಾ 1 ಕೋಟಿ ರೂ. ನೆರವು ನೀಡಿದರೆ, ಕೃಷಿ ಜತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಸಾಲ ನೀಡಲು ಸಾಧ್ಯ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಸಹಕಾರಿಯೊಬ್ಬರು ಹೇಳಿದರು.

ನಬಾರ್ಡ್ ಸಮ್ಮತಿ

ಬೆಳೆ ಸಾಲಕ್ಕಾಗಿ ಶೇ.4.5 ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಈ ಬಾರಿ ಹೆಚ್ಚಿಸಲು ನಬಾರ್ಡ್ ಸಮ್ಮತಿಸಿದ್ದು, 5,400 ಕೋಟಿ ರೂ. ಸಾಲ ನೀಡುತ್ತಿದೆ. ಕಳೆದ ವರ್ಷ 4,600 ಕೋಟಿ ರೂ. ಸಾಲ ಒದಗಿಸಿತ್ತು. ಹಾಗೇ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೂ ಮರು ಹಣಕಾಸಿಗೆ ಒಪ್ಪಿದ್ದು, ಈ ಸಾಲಕ್ಕೆ ಸರ್ಕಾರ ಖಾತರಿ ನೀಡಬೇಕಾಗಿದೆ. ಈ ಕುರಿತ ಪ್ರಸ್ತಾವನೆಗೆ ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆ ಅಸ್ತು ಎನ್ನುವುದು ಬಾಕಿ ಇದೆ. ಪ್ರಸಕ್ತ ವರ್ಷ 24.5 ಲಕ್ಷ ರೈತರಿಗೆ ಒಟ್ಟು 16,000 ಕೋಟಿ ರೂ. ಸಾಲ ವಿತರಿಸುವ ಗುರಿ ಇದೆ. ಕಳೆದ ವರ್ಷ 22 ಲಕ್ಷ ರೈತರಿಗೆ 13,500 ಕೋಟಿ ರೂ. ಸಾಲ ಹಂಚಿಕೆಯಾಗಿತ್ತು.

ಉದಾರತೆ ತೋರಿಸಲಿ

ಮುಂಗಾರು ಹಂಗಾಮಿನ ಸಿದ್ಧತೆ ಕೈಗೊಂಡಿರುವ ರೈತರಿಗೆ ಹೊಸ ಸಾಲಗಳನ್ನು ನೀಡುವುದಕ್ಕೆ ಕ್ರಮವಹಿಸಿದ್ದು, ಸಾಲ ನೀಡುವಾಗ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ಉದಾರತೆ ತೋರಿಸಬೇಕಾಗಿದೆ. ಭೂದಾಖಲೆಗಳ ಪೈಕಿ ಹಿಂದಿನ ವರ್ಷದ ಪಹಣಿ ಸದ್ಯಕ್ಕೆ ಪರಿಗಣನೆ, ಆಯಾ ಡಿಸಿಸಿ ಬ್ಯಾಂಕ್ ಎಂಡಿ/ಸಿಇಒಗಳಿಗೆ ಅಧಿಕಾರ ನೀಡುವುದು. ನಂತರ ಬೋರ್ಡ್ ಮೀಟಿಂಗ್​ನಲ್ಲಿ ಘಟನೋತ್ತರ ಮಂಜೂ ರಾತಿ ಪಡೆಯುವುದು ಇತ್ಯಾದಿ ಅಂಶಗಳಿವೆ. ಇದನ್ನು ಸಚಿವರು ಪರಾಮಶಿಸಿ ಒಪ್ಪಿಗೆ ನೀಡಿದ ಬಳಿಕ ಸುತ್ತೋಲೆ ರವಾನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಾರದೊಳಗಾಗಿ ಹಣ್ಣು-ತರಕಾರಿ ರಫ್ತಿಗೆ ಕ್ರಮ

ಬೆಂಗಳೂರು: ಒಂದು ವಾರದೊಳಗಾಗಿ ರಾಜ್ಯದ ಹಣ್ಣು-ತರಕಾರಿ ರಫ್ತು ಶುರುವಾಗಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ವಿಮಾನಯಾನ ಸಚಿವರ ಜತೆ ರ್ಚಚಿಸಿ ರಫ್ತಿಗೆ ಅವಕಾಶ ಕಲ್ಪಿಸಲಿದೆ. ಹಣ್ಣು-ತರಕಾರಿ ರಫ್ತು ಸಂಬಂಧ ಸಿಎಂ ಬಿ.ಎಸ್. ಯಡಿಯೂರಪ್ಪ ಜತೆ ತೋಟಗಾರಿಕೆ ಸಚಿವ ನಾರಾಯಣಗೌಡ ಚರ್ಚೆ ನಡೆಸಿದರು. ಪ್ರತಿವಾರ 220 ಮೆ. ಟನ್​ಗೂ ಹೆಚ್ಚು ಹಣ್ಣು-ತರಕಾರಿ ವಿದೇಶಕ್ಕೆ ರಫ್ತಾಗಲಿದೆ. ಕಾಗೋ ದರ ಏರಿಕೆಯಿಂದಾಗಿ ರಫ್ತು ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ನಾರಾಯಣಗೌಡ ರಫ್ತುದಾರರು ಹಾಗೂ ಕೆಪೆಕ್, ಎಪೆಡಾ ಸಂಸ್ಥೆಗಳ ಜತೆ ಸಭೆ ನಡೆಸಿದ್ದರು. ರಫ್ತಿಗೆ ಇರುವ ಸಮಸ್ಯೆಯ ಮಾಹಿತಿಯನ್ನು ಸಚಿವರು ಪಡೆದಿದ್ದರು. ಮಂಗಳವಾರ ರಫ್ತುದಾರರು ಆಯಾ ದೇಶಗಳಲ್ಲಿನ ತರಕಾರಿ-ಹಣ್ಣಿನ ಬೇಡಿಕೆ ಕುರಿತು ಮಾಹಿತಿ ಕಲೆ ಹಾಕಿ ಸಚಿವರಿಗೆ ನೀಡಿದ್ದಾರೆ. ಅದನ್ನು ಪಡೆದ ಸಚಿವ ನಾರಾಯಣಗೌಡ ಸಿಎಂ ಯಡಿಯೂರಪ್ಪ ಜತೆ ರ್ಚಚಿಸಿದ್ದಾರೆ.

ನಗರ ತೊರೆದು ಹಳ್ಳಿಗಳಿಗೆ ಮರಳಿದವರು ಒಳಗೊಂಡಂತೆ ಕೃಷಿ, ಕೃಷಿ ಪೂರಕ ಚಟುವಟಿಕೆಗಳಿಗೆ ಸಾಲ ನೀಡುವ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇನ್ನೂ 2-3 ದಿನಗಳಲ್ಲಿ ಸ್ಪಷ್ಟ ನಿರ್ದೇಶನ ನೀಡಲಾಗುವುದು.

| ಎಸ್.ಟಿ. ಸೋಮಶೇಖರ್ ಸಹಕಾರ ಸಚಿವ

ಮೃತ್ಯುಂಜಯ ಕಪಗಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net