

ಕೇಂದ್ರ ಸರ್ಕಾರ ಸೋಮವಾರ ಘೋಷಿಸಿರುವ ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ ನಲ್ಲಿ ಸಣ್ಣ ಸಾಲಗಾರರ ಸಾಲಕ್ಕೆ ಸರ್ಕಾರವೇ ಖಾತರಿ ನೀಡಲಿದೆ. ಕಿರು ಹಣಕಾಸು ಸಂಸ್ಥೆ (ಎಂಎಫ್ಐ)ಗಳ 25 ಲಕ್ಷ ಸಾಲಗಾರರು ಇದರ ಫಲಾನುಭವಿಗಳಾಗುತ್ತಾರೆ. ಈ ಯೋಜನೆಯಲ್ಲಿ ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ಗಳಿಗೆ ಸರ್ಕಾರ ಖಾತರಿ ನೀಡಲಿದೆ. ಹೊಸ ಅಥವಾ ಈಗಾಗಲೇ ಇರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ-ಎಂಎಫ್ಗಳು ಅಥವಾ ಎಂಎಫ್ಐಗಳ ಮೂಲಕ 25 ಸಣ್ಣ ಸಾಲಗಾರರಿಗೆ ತಲಾ ಗರಿಷ್ಠ 1.25 ಲಕ್ಷ ರೂಪಾಯಿ ಸಾಲ ಒದಗಿಸುವುದು ಇದರ ಉದ್ದೇಶ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದರಲ್ಲಿ ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿದರ ಎಂಸಿಎಲ್ಆರ್ ಪ್ಲಸ್ ಶೇಕಡ 2 ಇರಲಿದೆ. ಸಾಲದ ಅವದಿ ಗರಿಷ್ಠ 3 ವರ್ಷ. 89 ದಿನಗಳ ಸುಸ್ತಿದಾರರು ಸೇರಿ ಎಲ್ಲ ಸಾಲಗಾರರೂ ಇದಕ್ಕೆ ಅರ್ಹರಾಗಿರುತ್ತಾರೆ. ಈ ಗ್ಯಾರೆಂಟಿ 2022ರ ಮಾರ್ಚ್ 31ರ ತನಕ ಸಿಗಲಿದ್ದು, ಒಟ್ಟು ಸಾಲದ ಖಾತರಿ ಮೊತ್ತ 7,500 ಕೋಟಿ ರೂಪಾಯಿ ಮಾತ್ರ. ಅರ್ಹ ಫಲಾನುಭವಿಗಳ ಶೇಕಡ 75 ಸುಸ್ತಿ ಸಾಲಕ್ಕಷ್ಟೇ ಸರ್ಕಾರ ನ್ಯಾಷನಲ್ ಕ್ರೆಡಿಟ್ ಗ್ಯಾರೆಂಟಿ ಟ್ರಸ್ಟೀ ಕಂಪನಿ (ಎನ್ಸಿಜಿಟಿಸಿ) ಮೂಲಕ ಗರಿಷ್ಠ ಮೂರು ವರ್ಷ ತನಕ ಖಾತರಿ ನೀಡಲಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 23,220 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ. ಕೋವಿಡ್ ಚಿಕಿತ್ಸೆಗೆ 7,929 ಕೋವಿಡ್ ಆರೋಗ್ಯ ಕೇಂದ್ರ, 9,954 ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಸೇರಿ ಕೋವಿಡ್ ಚಿಕಿತ್ಸಾ ಕೇಂದ್ರಗಳ 25 ಪಟ್ಟು ಹೆಚ್ಚಳಕ್ಕೆ 15,000 ಕೋಟಿ ರೂಪಾಯಿಯನ್ನು ಎಮರ್ಜೆನ್ಸಿ ಹೆಲ್ತ್ ಸಿಸ್ಟಮ್್ಸ ಪ್ರಾಜೆಕ್ಟ್ ್ಸ (2020-21)ಗೆ ನೀಡಲಾಗುತ್ತಿದೆ. ಅಲ್ಲದೆ ಆಕ್ಸಿಜನ್ ಬೆಡ್ಗಳ ಸಂಖ್ಯೆ ಏಳೂವರೆ ಪಟ್ಟು ಹೆಚ್ಚಿಸುವುದು, ಐಸೋಲೇಷನ್ ಬೆಡ್ ಸಂಖ್ಯೆಯನ್ನು 42 ಪಟ್ಟು ಹೆಚ್ಚಿಸುವುದು, ಐಸಿಯು ಬೆಡ್ಗಳನ್ನು 45 ಪಟ್ಟು ಹೆಚ್ಚಿಸುವುದು ಇದರಲ್ಲಿ ಸೇರಿದೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಸರ್ಕಾರ, 2022ರ ಮಾರ್ಚ್ 31ರ ಒಳಗೆ ಭಾರತಕ್ಕೆ ಬರುವ 5 ಲಕ್ಷ ವಿದೇಶಿ ಪ್ರವಾಸಿಗರಿಗೆ ಉಚಿತ ವೀಸಾ ನೀಡುವುದಾಗಿ ಘೋಷಿಸಿದೆ. ಒಬ್ಬ ಪ್ರವಾಸಿಗನಿಗೆ ಒಮ್ಮೆ ಮಾತ್ರ ಇದು ಸಿಗಲಿದೆ. ಇದಕ್ಕಾಗಿ 100 ಕೋಟಿ ರೂಪಾಯಿ ಮೀಸಲಿಟ್ಟಿರ್ಙುವ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿ ಮಾಡಿದೆ. 11,000ದಷ್ಟು ನೋಂದಾಯಿತ ಪ್ರವಾಸಿ ಗೈಡ್ಗಳು/ಟ್ರಾವೆಲ್ಸ್ ಮತ್ತು ಟೂರಿಸಂ ಪಾಲುದಾರರಿಗೆ ಹಣಕಾಸಿನ ನೆರವನ್ನೂ ಸರ್ಕಾರ ಘೋಷಿಸಿದೆ.
ಆತ್ಮನಿರ್ಭರ ರೋಜ್ಗಾರ್ ವಿಸ್ತರಣೆ: ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆ ಅವಧಿಯನ್ನು 2021ರ ಜೂ.30 ರಿಂದ 2022ರ ಮಾರ್ಚ್ 31ರ ತನಕ ವಿಸ್ತರಿಸಲಾಗಿದೆ. 80,000 ಸಂಸ್ಥೆಗಳಲ್ಲಿ ಅಂದಾಜು 21.4 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸುವುದು ಇದರ ಉದ್ದೇಶ.
ಕೋವಿಡ್ ಸಂಕಷ್ಟ ಕಾಲದಲ್ಲಿ ದೇಶದ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸುವ ಯೋಜನೆಯನ್ನು ಮೇ ತಿಂಗಳಿಂದ ನವೆಂಬರ್ ತನಕ ವಿಸ್ತರಿಸಲಾಗಿದೆ. ಇದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (ಪಿಎಂಜಿಕೆವೈ) ಅಧೀನ ಬರುತ್ತದೆ. ಈ ವಿಸ್ತರಣೆಯಿಂದಾಗಿ ಸರ್ಕಾರಕ್ಕೆ 94,000 ಕೋಟಿ ರೂಪಾಯಿ ವೆಚ್ಚ ಬೀಳುತ್ತಿದ್ದು, ಪಿಎಂಜಿಕೆವೈಗೆ ಒಟ್ಟು 2.28 ಲಕ್ಷ ಕೋಟಿ ರೂಪಾಯಿಯನ್ನು ಸರ್ಕಾರ ವ್ಯಯಿಸುತ್ತಿದೆ.