

ಬೆಂಗಳೂರು: ಖ್ಯಾತ ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ ಅವರು ನಗರದ ಅಪೋಲೋ ಆಸ್ಪತ್ರೆಯಲ್ಲಿ ಇಂದು (ಅ.13) ಕೊನೆಯುಸಿರೆಳೆದರು.
ಸಚ್ಚಿದಾನಂದ ಮೂರ್ತಿ ಅವರು ಇತ್ತೀಚೆಗಷ್ಟೇ ಶ್ವಾಸಕೋಶ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಆದರೆ, ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಸಚ್ಚಿದಾನಂದ ಮೂರ್ತಿ ಅವರು ಮಲಯಾಳಂ ಮನೋರಮಾ ಮತ್ತು ದಿ ವೀಕ್‌ನ ರೆಸಿಡೆಂಟ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದರು. ಪತ್ರಕರ್ತರಾಗಿ ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪ್ರೆಸ್ ಕೌನ್ಸಿಲ್ ಸದಸ್ಯರಾಗಿಯೂ ಸಚ್ಚಿದಾನಂದ ಮೂರ್ತಿ ಅವರು ಸೇವೆ ಸಲ್ಲಿಸಿದ್ದರು.
19ನೇ ವಯಸ್ಸಿನಲ್ಲಿ ಪತ್ರಕರ್ತರಾದ ಸಚ್ಚಿದಾನಂದ ಅವರು ಪತ್ರಿಕೋದ್ಯಮದಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ. ಸುಮಾರು 35 ದೇಶಗಳನ್ನು ಸುತ್ತಿ ಬಂದಿದ್ದಾರೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಮತ್ತು ಆಡಳಿತದ ಬಗ್ಗೆ ಪರಿಣಿತಿ ಹೊಂದಿದ್ದರು. ಪತ್ರಿಕೋದ್ಯಮದಲ್ಲಿ ಅವರ ಸೇವೆಗಾಗಿ ದರ್ಲಭ್ ಸಿಂಗ್ ಸ್ಮಾರಕ ಪ್ರಶಸ್ತಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿಶಿಷ್ಟ ಪ್ರಶಸ್ತಿಯನ್ನು ಪಡೆದಿದ್ದಾರೆ.