

ಆನ್ಲೈನ್ ಗೇಮಿಂಗ್ ಎಂಬುದು ಜೂಜಿನ ಪ್ರತಿರೂಪ. ಒಮ್ಮೆ ಈ ಚಟಕ್ಕೆ ದಾಸರಾದವರು ಅದರಿಂದ ಹೊರಬರುವುದು ಕಷ್ಟಸಾಧ್ಯ. ಅದರಲ್ಲೂ, ಹದಿಹರೆಯದವರು, ಯುವಕರು ಅಷ್ಟೇಕೆ ಗೃಹಿಣಿಯರು ಕೂಡ ಈ ಆನ್ಲೈನ್ ಆಟಗಳಲ್ಲಿ ತೊಡಗಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸಾಲ ತೀರಿಸಲಾಗದೆ, ಬದುಕಿನಲ್ಲಿ ಮುಂದಿನ ದಾರಿ ಕಾಣದೆ ಆತ್ಮಹತ್ಯೆಯ ದಾರಿ ತುಳಿಯುತ್ತಿರುವ ಘಟನೆಗಳು ಹೆಚ್ಚುತ್ತಿರುವುದು ನಿಜಕ್ಕೂ ಗಂಭೀರವಾದ ಸಂಗತಿ. ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಸಿಕ್ಕಾಪಟ್ಟೆ ಸಾಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಉತ್ತರ ಕರ್ನಾಟಕ ಮೂಲದ ಇಬ್ಬರು ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆನ್ಲೈನ್ ಗೇಮಿಂಗ್ನ 7 ದೊಡ್ಡ ಪ್ಲಾಟ್ಫಾರ್ಮ್ಗಳಲ್ಲಿ 55 ಕೋಟಿ ಬಳಕೆದಾರರಿದ್ದಾರೆ- ಇದು ಹೈಕೋರ್ಟ್ಗಳಲ್ಲಿ ಸರ್ಕಾರವೇ ಸಲ್ಲಿಸಿರುವ ಮಾಹಿತಿ. ಇಲ್ಲಿ ಪ್ರತಿನಿತ್ಯ ಸರಾಸರಿ 500 ಕೋಟಿ ಅಂದರೆ ವರ್ಷಕ್ಕೆ 1.80 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಸಣ್ಣ ಪ್ರದೇಶಗಳಿಂದ ಹಿಡಿದು ದೇಶದ ಮಹಾನಗರಗಳವರೆಗೂ ‘ಯುವ ಕ್ರಿಕಟ್ನ ಭವಿಷ್ಯವಾಣಿ’ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಣಕ್ಕೆ ಇಡಲಾಗುತ್ತಿದೆ. ಉದ್ಯೋಗಿಗಳು ತಮ್ಮ ಸಂಬಳ ಮತ್ತು ಉಳಿತಾಯದ ಹಣವನ್ನು ಆನ್ಲೈನ್ ಆಟ ಅಥವಾ ಜೂಜಾಟಗಳಲ್ಲಿ ತೊಡಗಿಸುತ್ತಿದ್ದರೆ, ನಿರುದ್ಯೋಗಿಗಳು ಮತ್ತು ಕಾಲೇಜ್ ವಿದ್ಯಾರ್ಥಿಗಳು ದುಬಾರಿ ಬಡ್ಡಿದರದಲ್ಲಿ ಸಾಲ ಪಡೆದು ಹಣ ಹಾಕುತ್ತಿದ್ದಾರೆ.
ಈ ಆನ್ಲೈನ್ ಗೇಮಿಂಗ್ಗಳನ್ನು ನಿಷೇಧಿಸಬೇಕು ಎಂದು ದೇಶದ ಹಲವು ಹೈಕೋರ್ಟ್ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ. ಕರ್ನಾಟಕ, ತಮಿಳುನಾಡು. ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೆಲವು ಸ್ವರೂಪದ ಆನ್ಲೈನ್ ಗೇಮ್ಳನ್ನು ನಿಷೇಧಿಸಿವೆ. ಆಂಧ್ರಪ್ರದೇಶ, ಅಸ್ಸಾಂ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಕೌಶಲ ಆಧಾರಿತ ಮತ್ತು ಅದೃಷ್ಟ ಆಧಾರಿತ- ಹೀಗೆ ಎರಡು ಸ್ವರೂಪದ ಗೇಮ್ಳನ್ನು ನಿಷೇಧಿಸಿವೆ. ಆದರೆ, ದೇಶಾದ್ಯಂತ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದ ಅಗತ್ಯವಿದೆ. ಆನ್ಲೈನ್ ಗೇಮಿಂಗ್ ಮೇಲೆ ಮುಂಚೆ ಸರ್ಕಾರದ ನಿಯಂತ್ರಣ ಇರಲಿಲ್ಲ. 2023ರ ಜೂನ್ನಲ್ಲಿ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ಸಚಿವಾಲಯವು ಈ ಬಗ್ಗೆ ನಿಯಮಗಳನ್ನು ರೂಪಿಸಿ, ಮೂಗುದಾರ ಹಾಕಿದೆ.
ಹಣವನ್ನು ಪಣಕ್ಕಿಟ್ಟು ಆಡುವ ಗೇಮ್ಳಿಗೆ ಅವಕಾಶವಿಲ್ಲ ಎಂದು ಹೊಸ ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಜೂಜಾಟ ಉದ್ದೇಶದಿಂದ ನಡೆಯುತ್ತಿರುವ ರಿಯಲ್ ಮನಿ ಗೇಮ್ಳಿಗೆ (ಆರ್ಎಂಜಿ) ದೇಶದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಟವೊಂದು ಅದರ ಫಲಿತಾಂಶದ ಆಧಾರದಲ್ಲಿ ಬಹುಮಾನದ ಹಣ ನೀಡುವಂತಿದ್ದರೆ ಅಂತಹ ಗೇಮ್ಗಳಿಗೆ ಅವಕಾಶವಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ. ಆದರೆ, ಪ್ರಾಯೋಗಿಕ ನೆಲೆಯಲ್ಲಿ ಇವುಗಳು ಜಾರಿಯಾಗಿಲ್ಲ. ಆನ್ಲೈನ್ ಗೇಮ್ ಕಂಪನಿಗಳು ಯಾವುದೇ ಅಡ್ಡಿ, ಆತಂಕವಿಲ್ಲದೆ ಆಟದ ಹೆಸರಲ್ಲಿ ಜೂಜನ್ನು ನಡೆಸುತ್ತಿವೆ. ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದಿಂದ ಜನರಲ್ಲಿ ಈ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸವೂ ಅಗತ್ಯವಾಗಿ ಆಗಬೇಕು.