

ಚಿತ್ರದುರ್ಗ: ಸಾಲ ಪಾವತಿಸದ ರೈತರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ನಿಷೇಧಿಸಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ಲಿಂ. ಶ್ರೀ ಶಿವಕುಮಾರ ಶ್ರೀಗಳ 30ನೇ ವರ್ಷದ ಶ್ರದ್ಧಾಂಜಲಿ ಸಮಾರಂಭದಲ್ಲಿ ಶನಿವಾರ ಮಾತನಾಡಿ, ಈ ಸಂಬಂಧ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದರು.
ಸಾಲ ಪಡೆದ ಕೃಷಿಕರು ಅನುಭವಿಸುತ್ತಿರುವ ಕಿರುಕುಳ ಗಮನಕ್ಕಿದೆ. ರೈತವಿರೋಧಿ ನೀತಿಗಳನ್ನು ಕೈ ಬಿಡಲು ಕಾನೂನಿನ ಬಲ ಒದಗಿಸಿ ಸಾಲ ತೀರಿಸಲು ಅವಕಾಶ ಕಲ್ಪಿಸಲಾಗುವುದು ಎಂದರು. ಹಣಕಾಸು ಸಂಸ್ಥೆಗಳು ರೈತರಿಗೆ ನೋಟಿಸ್ ನೀಡುವುದು, ಅವರ ಮನೆ, ಆಸ್ತಿ ಮುಟ್ಟುಗೋಲು ಹಾಕಿ ಕೊಳ್ಳುವುದನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ರಾಜ್ಯದ 14 ಲಕ್ಷ ರೈತರ ಮಕ್ಕಳು ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಫಲಾನುಭವಿಗಳಿದ್ದಾರೆ. ಕೃಷಿ ಕಾರ್ವಿುಕರು ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳು ಸೇರಿ ಎಲ್ಲ ಶ್ರಮಿಕ ವರ್ಗದವರ ಮಕ್ಕಳಿಗೆ ಈ ಯೋಜನೆ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಸಿರಿಗೆರೆಯ ಲಿಂಗೈಕ್ಯ ಶ್ರೀಗಳು, ಅನೇಕ ಸಮಸ್ಯೆ, ದುಃಖ-ದುಮ್ಮಾನ ಎದುರಿಸಿ ಸಮಾಜದ ಏಳಿಗೆಗೆ ಶ್ರಮಿಸಿ ಶ್ರೇಷ್ಠರಾಗಿದ್ದಾರೆ ಎಂದು ಬಣ್ಣಿಸಿದರು.
ರೈತರಿಗೆ ಕಿರುಕುಳ ತಪ್ಪಿಸಲು ಕ್ರಮ: ಸಾಲ ವಸೂಲು ಹೆಸರಲ್ಲಿ ರೈತರಿಗೆ ಕಿರುಕುಳ ನೀಡುವುದನ್ನು ಸರ್ಕಾರ ತಪ್ಪಿಸಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಕೆರೆ, ಕಟ್ಟೆ ತುಂಬಿವೆ. ಕೆಲವೆಡೆ ಅತಿವೃಷ್ಠಿಯಿಂದ ಬೆಳೆ ನಾಶವಾಗಿದೆ. ಸೂಕ್ತ ಪರಿಹಾರ ನೀಡುವುದಾಗಿ ಸಿಎಂ ಸದನದಲ್ಲಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. ದೇಶಾದ್ಯಂತ ರೈತರು ಕಟ್ಟಿದ್ದ 26 ಸಾವಿರ ಕೋಟಿ ರೂ. ಬೆಳೆ ವಿಮಾ ಕಂತಿಗೆ, ಒಂದು ಲಕ್ಷ ಕೋಟಿ ರೂ. ಪರಿಹಾರ ದೊರಕಿದೆ. ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದೆ ಎಂದರು.
ಆದೇಶ ಹಿಡಿದು ಬನ್ನಿ: ಮುಂದಿನ 2023ರಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ ಆಯೋಜಿಸಲಾ ಗುವುದು. ಅಂದಿನ ಕಾರ್ಯಕ್ರಮಕ್ಕೆ ಆಗಮಿಸುವಾಗ ಸಿಎಂ ಬೊಮ್ಮಾಯಿ ಅವರು ಕೊಟ್ಟೂರು ಏತ ನೀರಾವರಿ ಯೋಜನೆ ಆದೇಶ ಹಿಡಿದು ಬರಬೇಕು ಎಂದು ಡಾ. ಶಿವಮೂರ್ತಿ ಶಿವಾಚಾರ್ಯರು ಆಶಿಸಿದರು.
ಚಿತ್ರದುರ್ಗ: ಪೇಸಿಎಂ ಅಭಿಯಾನ ಕಾಂಗ್ರೆಸ್ ನಾಯಕರ ಡರ್ಟಿ ಪಾಲಿಟಿಕ್ಸ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಸಿರಿಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೇರ ದಾಖಲೆಗಳನ್ನು ನೀಡದೆ ಕಾಂಗ್ರೆಸ್ ನಾಯಕರು ಇಂಥ ಕೆಟ್ಟ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯಾವುದೇ ನೈತಿಕತೆ ಇಲ್ಲದೆ ನನ್ನ ಹೆಸರು ಕೆಡಿಸಲು ಕೈ ನಾಯಕರು ಹುನ್ನಾರ ನಡೆಸಿದ್ದಾರೆ. ಅವರಿಗೆ ಜನಪರ ಕಾಳಜಿ ಇಲ್ಲ. ನೀಚ ರಾಜಕೀಯದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಅವರಿದ್ದಾರೆ. ಅಧಿಕಾರಕ್ಕೆ ಅವರು ಖಂಡಿತಾ ಬರುವುದಿಲ್ಲ ಎಂದರು. ಅಧಿಕಾರವಿಲ್ಲದೆ ಹತಾಶರಾಗಿ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಪೇಸಿಎಂ ಅಭಿಯಾನದ ವಿರುದ್ಧ ಕಾನೂನಾತ್ಮ ಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.