ಶಾಲೆ, ಕಾಲೇಜಲ್ಲಿ ಕಾಂಗ್ರೆಸ್‌ನಿಂದ ಕಾರ್ಯಕ್ರಮ

750x450_359530-congress
Published on

ಬೆಂಗಳೂರು: ಆರ್‌ಎಸ್‌ಎಸ್ ಪ್ರಣೀತ ಬಿಜೆಪಿ ಸಂವಿಧಾನವನ್ನು ನಾಶ ಮಾಡಲು ಹೊರಟಿದೆ. ಇದರ ವಿರುದ್ಧ ಜಾಗೃತಿ ಮೂಡಿಸಲು ರಾಷ್ಟ್ರಾದ್ಯಂತ ಸಂವಿಧಾನ ರಕ್ಷಕರನ್ನು ನೇಮಿಸಿ ಕಾರ್ಯಕ್ರಮ ರೂಪಿಸುತ್ತಿದ್ದು, ಕರ್ನಾಟಕದ ಮೂರು ಸಾವಿರ ಗ್ರಾಮಗಳಲ್ಲಿ ಸಂವಿಧಾನ ಕುರಿತ ಚರ್ಚೆ, ಶಾಲೆಗಳಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಐಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ರಾಜೇಶ್ ಲಿಲೋತಿಯಾ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಕಾರಣಕ್ಕೆ ಶೋಷಿತ ವರ್ಗದ ಜನರು ಅಧಿಕಾರ ಸೇರಿದಂತೆ ಒಂದಷ್ಟು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದನ್ನು ನಾಶ ಮಾಡಲು ಬಿಜೆಪಿ, ಆರ್‌ಎಸ್‌ಎಸ್ ಪ್ರಯತ್ನಿಸಿದೆ ಎಂದು ಆರೋಪಿಸಿದರು.
ನಾವು ಕಳೆದ ಎರಡು ವರ್ಷಗಳ ಹಿಂದೆ ಸಂವಿಧಾನ ರಕ್ಷಕ್ ಎನ್ನುವ ಕಾರ್ಯಕ್ರಮ ಜಾರಿಗೆ ತಂದೆವು. ಇದುವರೆಗು ದೇಶದಾದ್ಯಂತ ಸುಮಾರು 3 ಲಕ್ಷ ಮಂದಿ ಸಂವಿಧಾನ ರಕ್ಷಕರಾಗಿ ನೋಂದಾಯಿಸಿಕೊಂಡಿದ್ದಾರೆ. ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು, ಈ ವರ್ಷ ನವೆಂಬರ್ 26 ರಂದು 75 ವಸಂತಗಳು ತುಂಬಲಿದ್ದು ಇದನ್ನು ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಲಾಗುವುದು ಎಂದು ವಿವರಿಸಿದರು.
ಈ ಕಾರ್ಯಕ್ರಮವನ್ನು ದೆಹಲಿಯ ತಾಲ್ ಕಥೋರ ಸ್ಟೇಡಿಯಂ ಅಲ್ಲಿ ಆಯೋಜಿಸಲಾಗುವುದು.
ನಾವು ಇರುವ ತನಕ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಸಂವಿಧಾನ ಮುಗಿಸಲು ಸಾಧ್ಯವಿಲ್ಲ ಎಂದು ಸಂವಿಧಾನ ರಕ್ಷಕರು ನರೇಂದ್ರ ಮೋದಿ ಅವರಿಗೆ ಕೂಗಿ ಹೇಳಬೇಕು ಎಂದರು.
ಕರ್ನಾಟಕದಲ್ಲಿ ಸುಮಾರು ಮೂರು ಸಾವಿರ ಗ್ರಾಮಗಳಿದ್ದು, ಪ್ರತಿ ಗ್ರಾಮದಿಂದ ಒಬ್ಬ ಪುರುಷ, ಮಹಿಳಾ ಸಂವಿಧಾನ ರಕ್ಷಕ್ ಸ್ವಯಂಸೇವಕರನ್ನು ಗುರುತಿಸಲಾಗುವುದು. ಅವರಿಗೆ ತರಬೇತಿ ನೀಡಲಾಗುವುದು. ಸಂವಿಧಾನದ ಮೇಲೆ ಚರ್ಚೆ ನಡೆಸಲಾಗುವುದು. ಶಾಲೆ, ಕಾಲೇಜುಗಳಲ್ಲಿ ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ನವೆಂಬರ್ 26 ಕ್ಕೂ ಮುಂಚಿತವಾಗಿ ವಿಜೇತರ ಪಟ್ಟಿ ತಯಾರಿಸಲಾಗುವುದು. ಸ್ಪರ್ಧೆಗಳ ವಿಜೇತರನ್ನು ಹಾಗೂ ಪೋಷಕರನ್ನು ದೆಹಲಿಗೆ ಕರೆದು ಅಲ್ಲಿ ಅವರನ್ನು ಸನ್ಮಾನಿಸಲಾಗುವುದು, ನಾಲ್ಕು ವಿಭಾಗಗಳಾಗಿ ವಿಂಗಡಣೆ ಮಾಡಿದ್ದು ಧಾರವಾಡ, ಕಲಬುರ್ಗಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷರಾದ ಎನ್. ಧರ್ಮಸೇನ, ಎಸ್ ಸಿ ವಿಭಾಗದ ಸಂಯೋಜಕರಾದ ಎಸ್.ಎಸ್.ಚಿತ್ತಪ್ಪ, ಉಪಾಧ್ಯಕ್ಷ ಕಲೀರಾಂ ರಾಥೋಡ್, ಎಐಸಿಸಿ ಸಾಮಾಜಿಕ ಜಾಲತಾಣ ಉಸ್ತುವಾರಿ ಕರ್ನಾಟಕ ಪ್ರತಿನಿಧಿ ಡಾ. ವೈಶಾಕ, ವಕ್ತಾರರು ಹಾಗೂ ಎಐಸಿಸಿ ಸಂಯೋಜಕರಾದ ನೇಮಿರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net