

| ಎನ್.ಎಲ್.ಶಿವಮಾದು ಬೆಂಗಳೂರು
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಕಾಲೇಜುಗಳ ಬೋಧಕ ವರ್ಗದ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಪ್ರಾಧ್ಯಾಪಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಒಂದೇ ವರ್ಷದಲ್ಲಿ ಎರಡನೇ ಬಾರಿ ವರ್ಗಾವಣೆ ಆರಂಭಿಸಲಾಗಿದೆ. ವಿಷಯವಾರು ಎಲ್ಲೆಲ್ಲಿ, ಎಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂಬ ಮಾಹಿತಿ ಕೊಡದೆ ವರ್ಗಾವಣೆ ಪ್ರಕ್ರಿಯೆ ಶುರು ಮಾಡಿರುವುದು ಪ್ರಾಧ್ಯಾಪಕರಲ್ಲಿ ಹಲವು ಅನುಮಾನ ಮೂಡಿಸಿದೆ. ಖಾಲಿ ಇರುವ ಎಲ್ಲ ಹುದ್ದೆಗಳ ಮಾಹಿತಿ ಪ್ರಕಟಿಸಿ, ಪಾರದರ್ಶಕವಾಗಿ ಪ್ರಕ್ರಿಯೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಸೋಮವಾರ (ಡಿ.26) ಕೌನ್ಸೆಲಿಂಗ್ ಆರಂಭವಾಗಲಿದೆ. ಆದರೆ, ಮನಬಂದಂತೆ ವರ್ಗಾವಣೆ ನಿಯಮಗಳನ್ನು ರೂಪಿಸುತ್ತಿರುವ ಇಲಾಖೆ ವಿರುದ್ಧ ಆಕ್ರೋಶ ಸ್ಪೋಟಗೊಂಡಿದೆ. ಪಾರದರ್ಶಕವಾಗಿ ಪ್ರಕ್ರಿಯೆ ನಡೆಸದಿದ್ದರೆ ಪ್ರಾಧ್ಯಾಪಕರು ವರ್ಗಾವಣೆ ಪ್ರಕ್ರಿಯೆಯನ್ನೇ ಬಹಿಷ್ಕರಿಸುವ ಎಚ್ಚರಿಕೆ ಕೊಟ್ಟಿದ್ದಾರೆ.
ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಇಬ್ಬರಿಗೂ ಸಾಕಷ್ಟು ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದ ಪ್ರಾಧ್ಯಾಪಕರು ವರ್ಗಾವಣೆಯಿಂದ ವಂಚಿತರಾಗುತ್ತಿದ್ದು, ಕೇವಲ ನಗರ ಪ್ರದೇಶದಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇವೆಲ್ಲದರ ನಡುವೆ ಖಾಲಿ ಹುದ್ದೆಗಳ ಮಾಹಿತಿಯನ್ನು ಮುಚ್ಚಿಟ್ಟು ವರ್ಗಾವಣೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಲಾಖೆಯ ಉತ್ತರ: ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 7 ಸಾವಿರ ಕಾಯಂ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ.15 ಹುದ್ದೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಆ ಪ್ರಕಾರ 1,050 ಪ್ರಾಧ್ಯಾಪಕರಿಗೆ ಅವಕಾಶ ದೊರೆಯಲಿದೆ. ಇದರ ಹೊರತಾಗಿ 1,500 ಹುದ್ದೆಗಳು ಖಾಲಿ ಇವೆ. ವರ್ಗಾವಣೆ ಸಮಯದಲ್ಲಿ ಯಾರೊಬ್ಬರೂ ಗ್ರಾಮೀಣ ಭಾಗಕ್ಕೆ ವರ್ಗಾವಣೆಯಾಗಲು ಇಚ್ಛೆ ಪಡದ ಕಾರಣ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಹುದ್ದೆಗಳು ಖಾಲಿ ಉಳಿಯಲಿವೆ. ಇದೇ ಕಾರಣಕ್ಕೆ ಶಿಕ್ಷಣ ಇಲಾಖೆಯು ಖಾಲಿ ಹುದ್ದೆಗಳ ಮಾಹಿತಿಯನ್ನು ಪ್ರದರ್ಶಿಸುತ್ತಿಲ್ಲ. ಅವಶ್ಯವಿರುವ ಹುದ್ದೆಗಳನ್ನಷ್ಟೇ ಮಾಹಿತಿ ನೀಡಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ತಿಳಿಸಿದ್ದಾರೆ.
ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಶಿಕ್ಷಣ ಇಲಾಖೆ ತೋರಿಸುತ್ತಿಲ್ಲ. ಒಂದು ವೇಳೆ ವರ್ಗಾವಣೆಗೆ ಲಭ್ಯವಿರುವ ಎಲ್ಲ ಹುದ್ದೆಗಳ ಮಾಹಿತಿ ನೀಡದಿದ್ದರೆ, ವರ್ಗಾವಣೆಯಲ್ಲಿ ಪ್ರಾಧ್ಯಾಪಕರು ಪಾಲ್ಗೊಳ್ಳಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ. | ಮಂಜುನಾಥ ಅಧ್ಯಕ್ಷ, ಪದವಿ ಕಾಲೇಜು ಪ್ರಾಧ್ಯಾಪಕರ ಸಂಘ ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿ ನೀಡುವುದರಿಂದ ಗ್ರಾಮೀಣ ಭಾಗದಲ್ಲಿರುವ ಹುದ್ದೆಗಳು ಭರ್ತಿಯಾಗುವುದಿಲ್ಲ. ಕೇವಲ ಮಹಾನಗರ ಪಾಲಿಕೆ, ಜಿಲ್ಲಾ ಕೇಂದ್ರಗಳಲ್ಲಿರುವ ಹುದ್ದೆಗಳು ಮಾತ್ರ ಭರ್ತಿಯಾಗಲಿವೆ. ಈ ಕಾರಣದಿಂದ ವರ್ಗಾವಣೆಗೆ ಲಭ್ಯವಿರುವ ಹುದ್ದೆಗಳನ್ನಷ್ಟೇ ಮಾಹಿತಿ ನೀಡಲಾಗುತ್ತಿದೆ. | ಪಿ. ಪ್ರದೀಪ್, ಕಾಲೇಜು ಶಿಕ್ಷಣ ಆಯುಕ್ತ
ಇಂದಿನಿಂದ ಕೌನ್ಸೆಲಿಂಗ್: ವೇಳಾಪಟ್ಟಿ ಪ್ರಕಾರ ಸೋಮವಾರ (ಡಿ.26) ವಿಶೇಷ ಪ್ರಕರಣಗಳ ವರ್ಗಾವಣೆ ಕೌನ್ಸೆ ಲಿಂಗ್ ನಡೆಸಲಾಗುತ್ತಿದೆ. ಇದಾದ ನಂತರ ಡಿ.29ರಿಂದ ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಆರಂಭವಾಗಲಿದೆ.