

ಬೆಂಗಳೂರು: ಕಾಲೇಜಿನ ಪ್ರೊಫೆಸರ್‌ವೊಬ್ಬರು ಅತೀವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತವಾಗಿ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ಶಿಕ್ಷಕಿಗೆ ಗಾಯಗೊಂಡಿರುವ ಪ್ರಕರಣ ನಗರದ ಮಹಾರಾಣಿ ಕಾಲೇಜಿನ ಆವರಣದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಬಿ.ಕಾಂ. ವಿದ್ಯಾರ್ಥಿನಿ ಅಶ್ವಿನಿ(೧೯), ಬಿಎಸ್ಸಿ ವಿದ್ಯಾರ್ಥಿನಿ ನಂದಪ್ರಿಯಾ(೧೯) ಹಾಗೂ ಸಂಗೀತ ಉಪನ್ಯಾಸಕಿ ಜ್ಯೋತಿ(೩೩) ಎಂಬುವರಿಗೆ ಗಾಯಗಳಾಗಿದೆ. ಇದೇ ವೇಳೆ ಕಾರು ಚಾಲಕ, ಪ್ರೊಫೆಸರ್ ನಾಗರಾಜ್ ಅವರಿಗೂ ಗಾಯಗಳಾಗಿದ್ದು, ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಅಶ್ವಿನಿಗೆ ತಲೆ ಮತ್ತು ಎರಡು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಣಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ನಾಗರಾಜ್ ಬೆಳಗ್ಗೆ ೯.೪೫ ರ ಸುಮಾರಿಗೆ ಕಾಲೇಜು ಆವರಣಕ್ಕೆ ಕಾರಿನಲ್ಲಿ ಬಂದಿದ್ದು, ಕಾರು ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬ್ರೇಕ್ ಬದಲು ಆಕ್ಸಿಲೆಟರ್ ಒತ್ತಿದ್ದಾರೆ. ಅದರಿಂದ ನಿಯಂತ್ರಿಸಲು ಸಾಧ್ಯವಾಗದೆ ವಿದ್ಯಾರ್ಥಿಗಳು ಓಡಾಡುವ ಮಾರ್ಗದ ಕಡೆ ಕಾರು ತಿರುಗಿಸಿದ್ದಾರೆ. ಇದೇ ವೇಳೆ ಕಾಲೇಜಿಗೆ ಬರುತ್ತಿದ್ದ ಅಶ್ವಿನಿ ಮತ್ತು ನಂದಪ್ರಿಯಾಗೆ ಡಿಕ್ಕಿ ಹೊಡೆದು, ಬಳಿಕ ಬೈಕ್ ಪಾರ್ಕಿಂಗ್ ಬಳಿ ನಿಂತಿದ್ದ ಸಂಗೀತ ಉಪನ್ಯಾಸಕಿ ಜ್ಯೋತಿಗೆ ಗುದ್ದಿದ್ದಾರೆ. ಬಳಿಕ ಎರಡ್ಮೂರು ಬೈಕ್‌ಗಳು ಹಾಗೂ ಒಂದು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು, ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಗೆಯೇ ನಾಗರಾಜ್ ಕಾರಿನ ಮುಂಭಾಗವೂ ಸಂಪೂರ್ಣ ಜಖಂಗೊಂಡಿದೆ.
ವಿದ್ಯಾರ್ಥಿನಿಯರ ಪೈಕಿ ನಂದಪ್ರಿಯಾ ಮತ್ತು ಸಂಗೀತ ಉಪನ್ಯಾಸಕಿ ಜ್ಯೋತಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ. ಆದರೆ, ಅಶ್ವಿನಿ ತಲೆ ಮತ್ತು ಎರಡು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಆಕೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಾರು ಚಾಲಕ ನಾಗರಾಜ್‌ಗೂ ಗಾಯಗಳಾಗಿದ್ದು, ಅವರಿಗೂ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ:
ಘಟನೆ ಬಳಿಕ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ಹಾಗೂ ಉತ್ತರ ಸಂಚಾರ ವಿಭಾಗದ ಡಿಸಿಪಿ ಸಚಿನ್ ಘೋರ್ಪಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಗರಾಜ್ ಅವರ ಪ್ರಾಥಮಿಕ ಹೇಳಿಕೆ ಪಡೆಯಲಾಗಿದ್ದು, ಈ ವೇಳೆ ಕಾರು ಪಾರ್ಕಿಂಗ್ ಮಾಡುವಾಗ ಗೊಂದಲಗೊಂಡು ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದ್ದೆ. ಬಳಿಕ ಬ್ರೇಕ್ ಒತ್ತಿದರೂ ಕಾರು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಕಾರು ಜಪ್ತಿ ಮಾಡಲಾಗಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿಯಲು ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸಾರಿಗೆ ಅಧಿಕಾರಿಗಳು ಬಂದು ಬ್ರೇಕ್ ವೈಫಲ್ಯದಿಂದ ಘಟನೆ ನಡೆದಿದೆಯೇ? ಬೇರೆ ಕಾರಣವೇ ಎಂಬುದನ್ನು ಖಚಿತ ಪಡಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.