

ಬೆಂಗಳೂರು: ವೃತ್ತಿ ಶಿಕ್ಷಣದಲ್ಲಿ ಖಾಸಗಿ ಕೋಟಾ ಅಡಿ ಹಂಚಿಕೆ ಮಾಡುವ ಸರ್ಕಾರಿ ಕೋಟಾದ ಶೇ.40ರಷ್ಟು ಸೀಟುಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ನಿಗದಿಪಡಿಸಿರುವ ಏಕಸ್ವರೂಪದ ವಿಶ್ವವಿದ್ಯಾಲಯ ಶುಲ್ಕವನ್ನು ಮಾತ್ರ ಪಡೆಯಲು ಸೂಕ್ತ ನಿರ್ದೇಶನ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪತ್ರ ಬರೆದು ಒತ್ತಾಯಿಸಿದೆ.
ಏಕರೂಪದ ವಿಶ್ವವಿದ್ಯಾಲಯ ಶುಲ್ಕವನ್ನು ಖಾಸಗಿ ವಿಶ್ವವಿದ್ಯಾಲಯಗಳು ಸಹ ಅಳವಡಿಸಿಕೊಳ್ಳುವುದರಿಂದ ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಕಾರಣದಿಂದ ಎಲ್ಲ ಖಾಸಗಿ ವಿವಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ ಸರ್ಕಾರದ ಒಪ್ಪಂದದ ಸಮಯದಲ್ಲಿಯೇ ನಿರ್ದೇಶನ ನೀಡುವಂತೆಯೂ ಕೋರಿದೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಕೆಇಎ ಹಂಚಿಕೆ ಮಾಡಿದ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿ ಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಅಂದಾಜು 1 ಲಕ್ಷದಿಂದ 1.5 ಲಕ್ಷ ರೂ.ವರೆಗೂ ವಸೂಲಿ ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಕೆಇಎಗೆ ದೂರು ನೀಡುತ್ತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಖಾಸಗಿ ವಿವಿಗಳು ಸರ್ಕಾರ ನಿಗದಿ ಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯಬೇಕಿದೆ. ಆದರೆ, ಈ ನಿಯಮವನ್ನು ಖಾಸಗಿ ವಿಶ್ವವಿದ್ಯಾಲಯಗಳು ಪಾಲನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೆಇಎ ಮನವಿ ಮಾಡಿದೆ.
ಸರ್ಕಾರವು ನಿಗದಿಪಡಿಸಿ ನೀಡುವ ಸೀಟ್ ಮ್ಯಾಟ್ರಿಕ್ಸ್‌ನಂತೆ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಪಾಲಿನ ಶೇ.40ರಷ್ಟು ಸೀಟುಗಳಲ್ಲಿ ಪ್ರಾಧಿಕಾರವು ಹಂಚಿಕೆ ಮಾಡುತ್ತಿರುವುದರಿಂದ ಸರ್ಕಾರವು ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಹಂಚಿಕೆ ಪಡೆಯುವ ಅಭ್ಯರ್ಥಿಗಳಿಂದ ಪಡೆಯಲಾಗುತ್ತಿದೆ.
ಆಯಾ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಅವರದ್ದೇ ಆದ ಕಾಯ್ದೆ ಇದ್ದು, ಶೇ.60ರಷ್ಟು ಸೀಟುಗಳ ಹಂಚಿಕೆಯ ನಿರ್ವಹಣೆ ಆಯಅ ಖಾಸಗಿ ವಿಶ್ವವಿದ್ಯಾಲಯಗಳಿಗೆ ಒಳಪಡುತ್ತದೆ. ಆದರೆ, ಸರ್ಕಾರದ ಪಾಲಿನ ಸೀಟುಗಳನ್ನು ಪ್ರಾಧಿಕಾರವು ಹಂಚಿಕೆ ಮಾಡುತ್ತಿರುವುದರಿಂದ ಖಾಸಗಿ ವಿಶ್ವವಿದ್ಯಾಲಯದಲ್ಲಿನ ಯೂನಿವರ್ಸಿಟಿ ಶುಲ್ಕವು ಈ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ಸರ್ಕಾರ ನಿಗದಿ ಮಾಡಿರುವ ಶುಲ್ಕವನ್ನೇ ಪಡೆಯುವಂತೆ ತಿಳಿಸಲಾಗಿದೆ.