

ಅನೇಕ ಭಾಷೆಗಳಲ್ಲಿ ಪ್ರಾವೀಣ್ಯ ಪಡೆದಿದ್ದ, ಅಸಂಖ್ಯಾತ ವಿಚಾರಗಳಲ್ಲಿ ಪ್ರೌಢಿಮೆ ಗಳಿಸಿದ್ದ ಬಹುಶ್ರುತ ವಿದ್ವಾಂಸ, ವಾಗ್ಮಿ, ಲೇಖಕ, ಅಂಕಣಕಾರ, ಪ್ರಾಧ್ಯಾಪಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ(89) ಶುಕ್ರವಾರ ಬೆಳಗಿನ ಜಾವ 2.06 ಗಂಟೆಗೆ ನಿಧನರಾದರು. ವಯೋಸಹಜವಾದ ಅಲ್ಪಕಾಲದ ಅಸ್ವಸ್ಥತೆಯ ನಂತರ ಬೆಂಗಳೂರಿನ ಮನೆಯಲ್ಲಿ ಕೊನೆಯುಸಿರೆಳೆದರು. ಕೃತಿಕಾರರಾಗಿ, ವಾಗ್ಮಿಯಾಗಿ ರಾಜ್ಯ, ದೇಶದಲ್ಲಿ ಪ್ರಸಿದ್ಧಿಪಡೆದಿದ್ದ ನಾರಾಯಣಾಚಾರ್ಯರು ಪತ್ನಿ ಕಮಲಮ್ಮ, ಪುತ್ರ ರಂಗರಾಮಾನುಜನ್, ಪುತ್ರಿಯರಾದ ನಿರ್ಮಲಾ ಶರ್ಮ, ಪದ್ಮಾಸಿನಿ ದಾಶರಥಿ, ಲಕ್ಷ್ಮೀ ನರಸಿಂಹನ್ ಸೇರಿ ಅಸಂಖ್ಯಾತ ಶಿಷ್ಯರನ್ನು ಅಗಲಿದ್ದಾರೆ. ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಲೇಖಕ ಬಾಬು ಕೃಷ್ಣಮೂರ್ತಿ ಸೇರಿ ಅನೇಕರು ಪಡೆದರು. ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿಯ ರುದ್ರಭೂಮಿಯಲ್ಲಿ ಮಧ್ಯಾಹ್ನದ ನಂತರ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಸರ್ಕಾರದ ಗೈರಿಗೆ ಅಸಮಾಧಾನ: ನಾಡು ಹಾಗೂ ದೇಶಕಂಡ ಅಪೂರ್ವ ವಿದ್ವಾಂಸ ಪ್ರೊ. ಕೆ.ಎಸ್.ನಾರಾಯಣಾಚಾರ್ಯರ ಅಂತಿಮ ದರ್ಶನಕ್ಕೆ ಯಾರೊಬ್ಬ ಜನಪ್ರತಿನಿಧಿಯಾಗಲಿ, ಸರ್ಕಾರದ ಪ್ರತಿನಿಧಿಯಾಗಲಿ ಆಗಮಿಸದೆ ಇದ್ದದ್ದು ನಾರಾಯಣಾಚಾರ್ಯರ ಶಿಷ್ಯವೃಂದದ ಅಸಮಾಧಾನಕ್ಕೆ ಕಾರಣವಾಗಿದೆ. ವಿದ್ವಾಂಸರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
ನಾಡಿನ ಬಹುಶ್ರುತ ವಿದ್ವಾಂಸ, ವಿದ್ವತ್ ಪರಂಪರೆಯ ಅಪೂರ್ವ ಪ್ರತಿನಿಧಿ ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ನಿಧನ ಸುದ್ದಿ ತಿಳಿದು ಆಘಾತವಾಗಿದೆ. ಸುದೀರ್ಘ ಅವಧಿ ಸಾಹಿತ್ಯಕೃಷಿ, ಶಾಸ್ತ್ರಾಧ್ಯಯನ, ಅಮೂಲ್ಯ ಕೃತಿ ರಚನೆ, ಸಂಶೋಧನೆ ಹಾಗೂ ವಿಶೇಷವಾಗಿ ದಿನಪತ್ರಿಕೆಗಳಲ್ಲಿ ನಿರ್ಭೀತ-ವಿಚಾರಪೂರ್ಣ ಅಂಕಣ ಬರಹಗಳಿಂದ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ರೀತಿಯಲ್ಲಿ ವಿಮಶಿಸುತ್ತಿದ್ದರು.
| ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪೇಜಾವರ ಮಠ, ಉಡುಪಿ
ಆಚಾರ್ಯರ ನಿಧನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಆರಾಧ್ಯ ದೇವರಾದ ರುಕ್ಮಿಣೀ ಸತ್ಯಭಾಮ ಸಮೇತ ಪಾಂಡುರಂಗ ವಿಠ್ಠಲ ದೇವರಲ್ಲಿ ಪ್ರಾರ್ಥಿಸುತ್ತೇನೆ.
| ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪುತ್ತಿಗೆ ಮಠ, ಉಡುಪಿ
ಆಚಾರ್ಯರು ರಾಷ್ಟ್ರಭಕ್ತಿ, ಆರ್ಷ ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ನಂಬಿದ ಮೌಲ್ಯಗಳಿಗೆ ನಿಷ್ಠರಾಗಿ ಬದುಕಿದವರು. ಕನ್ನಡದ ವಿವಿಧ ಪತ್ರಿಕೆಗಳ ಅಂಕಣಕಾರರಾಗಿ, ಮಾಧ್ಯಮಗಳಲ್ಲಿ ನಾಡು-ನುಡಿ ಸಂಸ್ಕೃತ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು.
| ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ
ವಿಜಯವಾಣಿ ಆರಂಭದ ದಿನಗಳಿಂದ (2012), ಇತ್ತೀಚಿನ ದಿನಗಳವರೆಗೆ ಪತ್ರಿಕೆಗೆ ಅಂಕಣ ಬರೆಯುತ್ತಿದ್ದ ಕೆ.ಎಸ್.ನಾರಾಯಣಾಚಾರ್ಯರು ಪುರಾಣ, ಮಹಾಕಾವ್ಯಗಳು ಸಾರಿರುವ ಮೌಲ್ಯಗಳನ್ನು ಇಂದಿನ ಸಮಕಾಲೀನ ಸ್ಥಿತಿಗೆ ಸಮೀಕರಿಸಿ ಸಮಾಜವನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದರು. ತೀಕ್ಷ್ಣವಾಗಿರುತ್ತಿದ್ದ ಅವರ ಅಂಕಣ ಬರಹಗಳು ಸಾಕಷ್ಟು ಚರ್ಚೆಗೆ, ವಿಚಾರಮಂಥನಕ್ಕೆ ಆಸ್ಪದ ಒದಗಿಸಿದ್ದವು. ‘ಚಿಂತನ’ದಲ್ಲಿ ಸಮಕಾಲೀನ ಸ್ಥಿತಿಯ ಬಗ್ಗೆ ವಿಶ್ಲೇಷಣಾತ್ಮಕ ಅಂಕಣ ಬರಹ, ‘ಸುದಿನ’ ದಲ್ಲಿ ಪುರಾಣಗಳ ತತ್ತ್ವಸಂದೇಶ ಕುರಿತ ಅವರ ಅಂಕಣಗಳು ಜನಮನ್ನಣೆ ಗಳಿಸಿದ್ದವು.
ಬಹುಶ್ರುತ ವಿದ್ವಾಂಸ ಡಾ.ಕೆ.ಎಸ್. ನಾರಾಯಣಾಚಾರ್ಯರು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗಳನ್ನು ತುಂಬ ವಿದ್ವತ್ಪೂರ್ಣವಾಗಿ, ಅಷ್ಟೇ ಪ್ರಖರವಾಗಿ ಮಂಡಿಸುತ್ತಿದ್ದರು. ಆಳವಾದ ಅಧ್ಯಯನ ಬಲ, ನೇರಮಾತು, ಹರಿತ ಲೇಖನಿ, ವೃದ್ಧಾಪ್ಯದಲ್ಲೂ ನಿರಂತರ ಚಟುವಟಿಕೆ- ಹೀಗೆ ಅವರ ಬದುಕಿನಪಥವೇ ಪ್ರೇರಣಾದಾಯಿ. ರಾಮಾಯಣ, ಮಹಾಭಾರತದ ಎಲ್ಲ ಆಯಾಮಗಳ ಬಗ್ಗೆಯೂ ಅಧಿಕೃತವಾಗಿ ಮಾತನಾಡಬಲ್ಲ, ಬರೆಯಬಲ್ಲ ವಿದ್ವತ್ತು ಅವರದ್ದು. ಪುರಾಣ ಸಂಗತಿಗಳನ್ನು ಪ್ರಸ್ತುತ ವಿದ್ಯಮಾನಗಳಿಗೆ ಸಮೀಕರಿಸಿ, ಸಮಾಜ ಬದಲಾಗಬೇಕಾದ ಪಥವನ್ನೂ ಅವರು ದರ್ಶಿಸುತ್ತಿದ್ದರು. ಸುಳ್ಳುಗಳನ್ನು ಖಂಡಿಸುತ್ತಿದ್ದ, ಸತ್ಯವಿಚಾರಗಳನ್ನು ಗಟ್ಟಿದನಿಯಲ್ಲಿ ಮಂಡಿಸುತ್ತಿದ್ದ ಅವರ ಬರಹಶೈಲಿ ಓದುಗರಿಗೆ ಆಪ್ತವಾಗಿತ್ತು. ‘ವಿಜಯವಾಣಿ’ಯಲ್ಲಿ ಅವರು ಹಲವು ವರ್ಷಗಳ ಕಾಲ ಅಂಕಣ ಬರೆದಿದ್ದು, ಅವು ಜನಮನ ಗೆದ್ದಿದ್ದವು. ನಾರಾಯಣಾಚಾರ್ಯರು ನಮ್ಮೊಂದಿಗೆ ಇಲ್ಲ ಎಂಬುದು ದುಃಖದ ಸಂಗತಿ. ಅವರ ಕುಟುಂಬವರ್ಗಕ್ಕೂ, ಅಭಿಮಾನಿಗಳಿಗೂ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ. ಅವರು ಬಿಟ್ಟುಹೋದ ಸಾಹಿತ್ಯ, ವೈಚಾರಿಕ ವಿಷಯಗಳು ಮುಂದೆಯೂ ನಾಡಿಗೆ ಬೆಳಕಾಗಲಿವೆ.
| ಡಾ.ವಿಜಯ ಸಂಕೇಶ್ವರ ಚೇರ್ಮನ್ ವಿಆರ್ಎಲ್ ಸಮೂಹ ಸಂಸ್ಥೆಗಳು
| ಆನಂದ ಸಂಕೇಶ್ವರ ವ್ಯವಸ್ಥಾಪಕ ನಿರ್ದೇಶಕರು ವಿಆರ್ಎಲ್ ಸಮೂಹ ಸಂಸ್ಥೆಗಳು
ಶತಮಾನದ ವಿದ್ವಾಂಸ ಡಾ. ಕೆ.ಎಸ್. ನಾರಾಯಣಾಚಾರ್ಯರು ಭಾರತಕ್ಕೆ ಪ್ಲೇಟೊ, ಅರಿಸ್ಟಾಟಲ್ ಇದ್ದಂತೆ. ಅವರು ಅಕ್ಷರಶಃ ರಾಮಾಯಣವನ್ನು ಜೀವಿಸಿದರು.
| ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ವಿದ್ವಾಂಸ, ವಾಗ್ಮಿ
ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರಾಗಿದ್ದ ನಾರಾಯಣಾಚಾರ್ಯರ ನಿಧನ ನಾಡಿಗೆ ಅತೀವ ದುಃಖ ತಂದಿದೆ. ಅವರ ಮರಣದಿಂದಾಗಿ ವಿದ್ವತ್ ಲೋಕಕ್ಕಷ್ಟೆ ಅಲ್ಲ, ಸಾಮಾನ್ಯ ಜನತೆಗೂ ನೋವು ಹಾಗೂ ನಷ್ಟ ಉಂಟಾಗಿದೆ.
| ದತ್ತಾತ್ರೇಯ ಹೊಸಬಾಳೆ ಆರೆಸ್ಸೆಸ್ ಸರಕಾರ್ಯವಾಹ
ನಾರಾಯಣಾಚಾರ್ಯರ ಅಗಲುವಿಕೆ ದುಃಖದ ಸಂಗತಿ. ಭಾರತದ ಆತ್ಮವನ್ನು, ಅದರ ಮೂಲಸಿದ್ಧಾಂತಗಳನ್ನು ಋಷಿಗಳ ವಾಣಿಯೊಂದಿಗೆ ಉದ್ಧರಿಸಿ ನಿರ್ಭಯವಾಗಿ ಭಾರತೀಯ ವಿಚಾರಗಳ ಪ್ರತಿಪಾದನೆ ಮಾಡುತ್ತಿದ್ದರು.
| ಅಖಿಲ ಭಾರತೀಯ ಸಾಹಿತ್ಯ ಪರಿಷದ್
‘ವಿದ್ವನ್ಮಣಿ’, ‘ವೇದಭೂಷಣ’, ‘ವಾಲ್ಮೀಕಿ ಹೃದಯಜ್ಞ’, ‘ರಾಮಾಯಣಾಚಾರ್ಯ’ ಮೊದಲಾದ ಬಿರುದುಗಳು ಮಠಾಧೀಶರಿಂದ, ‘ಗಮಕರತ್ನಾಕರ’ ‘ಗಮಕರತ್ನಾಕರ’, ‘ಕರ್ನಾಟಕ ಕಲಾಶ್ರೀ’, ವೇದಸಂಸ್ಕೃತಿಯ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ, ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2005ರಲ್ಲಿ ಗೌರವ ಡಿ.ಲಿಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ವೇದರತ್ನ ಸ್ವಾಮಿ ಗಂಗೇಶಾನಂದರ ಸ್ಮಾರಕ, ವಾಗ್ದೇವೀ ವರಸಂಜಾತ, ಶಾಸ್ತ್ರವಿದ್ಯಾನಿಧಿ, ಆವನೀ ಶೃಂಗೇರಿ ಮಠದಿಂದ ಆಸ್ಥಾನ ವಿದ್ವಾನ್ ಪದವಿ, ಬಂಗಾರದ ಕಡಗ, ಶ್ರೀ ಅಹೋಬಿಲಮಠದಿಂದ ಆಸ್ಥಾನವಿದ್ವಾನ್, ಉಪನ್ಯಾಸ ಮಾರ್ತಾಂಡ ಬಿರುದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ 2019ರಲ್ಲಿ ಪ್ರತಿಷ್ಠಿತ ಆದಿಕವಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೇಶದಾದ್ಯಂತ ರಾಮಾಯಣ, ಮಹಾಭಾರತ, ಗೀತೆ, ಭಾಗವತ, ಆಳ್ವಾರುಗಳು, ಮೊದಲಾದ ಸಾಹಿತ್ಯ ಕುರಿತ ಕನ್ನಡ, ತಮಿಳು, ಆಂಗ್ಲಗಳಲ್ಲಿ ಆಚಾರ್ಯರ ಸಾವಿರಾರು ಪ್ರವಚನಗಳು ಜನಪ್ರಿಯವಾಗಿವೆ. ಭಾರತೀಯ ಸಂಸ್ಕೃತಿ ಪ್ರಸಾರ ಸಂಶೋಧನೆ ಆಚಾರ್ಯರ ಉಸಿರಾಗಿತ್ತು.
ಕೆ.ಎಸ್. ನಾರಾಯಣಾಚಾರ್ಯ ಅವರು 1933ರಲ್ಲಿ ಬೆಂಗಳೂರು ಜಿಲ್ಲೆ ಕನಕಪುರದ ವೈದಿಕ ಶ್ರೀವೈಷ್ಣವ ಕುಟುಂಬದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ., ಬಿ.ಎ. ಆನರ್, ಎಂ.ಎ. (ಇಂಗ್ಲಿಷ್) ಪದವಿಗಳು (1954, 1957, 1958) ಪಡೆದರು. ‘ಡಬ್ಲು್ಯ.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೇಟ್ರ ಕಾವ್ಯದ ಮೇಲೆ ಭಾರತೀಯ ತತ್ತ ್ವಾಸ್ತ್ರ ಪ್ರಭಾವ’ ವಿಷಯದಲ್ಲಿ ಪಿಎಚ್ಡಿ ಪ್ರಬಂಧ ರಚಿಸಿದರು. ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ (1961), ಪ್ರವಾಚಕರಾಗಿ (1967), ಪ್ರಾಧ್ಯಾಪಕರಾಗಿ (1973), ಪ್ರಾಚಾರ್ಯರಾಗಿ (1991) 1993ರಲ್ಲಿ ನಿವೃತ್ತಿಯಾದರು. ‘ವೇದ ವಿದ್ಯಾ ಪ್ರಕಾಶನ’, ‘ಮಾಲೋಲ ಪ್ರಕಾಶನ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ ಅವರು ನೂರೈವತ್ತು ಗ್ರಂಥಗಳನ್ನು ರಚನೆ ಮಾಡಿದ್ದಾರೆ.