

ಬೆಂಗಳೂರು: ಕರ್ನಾಟಕ ಹಾಲು ಸಹಕಾರ ಮಹಾಮಂಡಲ (ಕೆಎಂಎ್) ನಂದಿನಿ ಹಾಲಿನ ಪ್ರತೀ ಲೀಟರ್ ಹಾಲಿನ ದರವನ್ನು 3 ರೂ. ಹೆಚ್ಚಿಸಿದ ಬೆನ್ನಲ್ಲೇ, ಹೈನುಗಾರರು ಕೂಡ ತಮಗೆ ಆ.1ರಿಂದ ಖರೀದಿ ದರವನ್ನು ಪೂರ್ವಾನ್ವಯಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರತಿ ಬಾರಿ ಹಾಲಿನ ಮಾರಾಟ ದರವನ್ನು ಏರಿಸಿದ ಹಲವು ದಿನಗಳ ನಂತರ ಹೈನುಗಾರರಿಗೆ ಖರೀದಿ ದರವನ್ನು ನಿಗದಿ ಮಾಡಲಾಗುತ್ತದೆ.
ಈ ರೀತಿ ಮಾಡುವ ವೇಳೆ ಮಾರಾಟದ ದಿನದ ಬದಲು ಪ್ರತ್ಯೇಕ ದಿನದಿಂದ ಅನ್ವಯವಾಗುವಂತೆ ಜಿಲ್ಲಾ ಒಕ್ಕೂಟಗಳು ಆದೇಶ ಹೊರಡಿಸುತ್ತವೆ. ಇದರಿಂದ ಕೆಲ ದಿನಗಳ ಮಟ್ಟಿಗೆ ಹೊಸ ದರದ ಹಣ ಕೈಸೇರುವುದಿಲ್ಲ ಎಂಬ ಆಕ್ಷೇಪ ಹೈನುಗಾರರ ವಲಯದಿಂದ ಕೇಳಿಬಂದಿದೆ.
ಈ ಬಾರಿ ಆ.1ರಿಂದ ಹಾಲಿನ ಮಾರಾಟ ದರದ ಪರಿಷ್ಕರಣೆ ಜಾರಿಗೆ ಬಂದಿದೆ. ಇದಾಗಿ ವಾರ ಕಳೆದರೂ ಹಾಸನ, ಕೋಲಾರ ಸೇರಿದಂತೆ ಹಲವು ಜಿಲ್ಲಾ ಒಕ್ಕೂಟಗಳು ಹಾಲು ಪೂರೈಸುವ ಉತ್ಪಾದಕರಿಗೆ ಹೊಸ ದರವನ್ನು ನಿಗದಿ ಮಾಡಿಲ್ಲ. ತಡವಾದ ದಿನಗಳಿಗೆ ಹೊಸ ದರ ನಿಗದಿ ಮಾಡದೆ ಹಳೆಯ ದರವನ್ನು ಅನ್ವಯಿಸುವುದರಿಂದ ನಮಗೆ ಅಷ್ಟು ದಿನದ ಲಾಭ ಸಿಗುವುದಿಲ್ಲ ಎಂದು ಹೈನುಗಾರರು ಅಲವತ್ತುಕೊಂಡಿದ್ದಾರೆ.
ಹಾಲು ಮಾರಾಟ ಹೆಚ್ಚಳವಾದ ದಿನದಿಂದಲೇ ಉತ್ಪಾದಕರಿಗೂ ಹೊಸ ದರ ಅನ್ವಯಿಸುವಂತೆ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ.
ಆದರೆ, ಈವರೆಗೆ ಕೆಎಂಎ್ನಿಂದ ಅಧಿಕೃತ ಸೂಚನೆ ಜಿಲ್ಲಾ ಒಕ್ಕೂಟಗಳಿಗೆ ಬಂದಿಲ್ಲ. ಇದರಿಂದ ಉತ್ಪಾದಕರಿಗೆ ನೀಡಬೇಕಾದ ಪ್ರತಿ ಲೀಟರ್ ದರ ಎಷ್ಟು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ. ವಿಳಂಬವಾದರೂ ಆ.1ರಿಂದಲೇ ಪೂರ್ವಾನ್ವಯವಾಗುವಂತೆ ನಿರ್ಧಾರ ಪ್ರಕಟಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.