ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ-ನಿರ್ಮಾಪಕನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವೀರೇಂದ್ರ ಬಾಬು(೩೮) ಬಂಧಿತ ಆರೋಪಿ. ಈತ ೨೦೨೧ರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಈ ಸಂಬಂಧ ೩೬ ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ‘ಸ್ವಯಂ ಕೃಷಿ’ ಎಂಬ ಸಿನಿಮಾ ನಿರ್ಮಿಸಿ, ನಟಿಸಿದ್ದಾನೆ. ದೂರುದಾರ ಮಹಿಳೆ ೨೦೨೧ರ ನವೆಂಬರ್‌ನಲ್ಲಿ ಸಿನಿಮಾ ವಿಚಾರವಾಗಿ ಭೇಟಿಯಾಗಿದ್ದರು. ಈ ವೇಳೆ ಆಕೆಗೆ ಕಾಫಿಯಲ್ಲಿ ಮತ್ತು ಬರುವ ಔಷಧಿ ಬೇರೆಸಿ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅಲ್ಲದೆ, ಅದನ್ನು ವಿಡಿಯೋ ಮಾಡಿಕೊಂಡು ವೈರಲ್ ಮಾಡುವುದಾಗಿ ಆಕೆಗೆ ಬ್ಲಾೃಕ್‌ಮೇಲ್ ಮಾಡಿ, ೧೫ ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಆದರೆ, ತನ್ನ ಘನತೆಗೆ ಧಕ್ಕೆ ಉಂಟಾಗುತ್ತದೆ ಎಂದು ಭಾವಿಸಿ ಮಹಿಳೆ ದೂರು ನೀಡಿರಲಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಕಳೆದ ಜುಲೈನಲ್ಲಿ ಸಂತ್ರಸ್ತೆಗೆ ಕರೆ ಮಾಡಿದ ಆರೋಪಿ, ತನ್ನ ಸ್ನೇಹಿತರಾದ ನಿರಂಜನ್ ರಾವ್, ಬಸವರಾಜು, ಶಿವಕುಮಾರ್, ದೀಕ್ಷಿತ್ ಸಹಾಯದಿಂದ ಆಕೆಯನ್ನು ಬಲವಂತವಾಗಿ ತನ್ನ ಕಾರಿನಲ್ಲಿ ಕೂರಿಸಿಕೊಂಡಯ ಸುತ್ತಾಡಿಸಿ ಮೈಮೇಲಿದ್ದ ಚಿನ್ನಾಭರಣ ಕೇಳಿದ್ದಾನೆ. ಆಕೆ ಕೊಡಲು ನಿರಾಕರಿಸಿದಾಗ ತಲೆಗೆ ಪಿಸ್ತೂಲ್ ಇಟ್ಟು ಬೆದರಿಸಿ ಸುಲಿಗೆ ಮಾಡಿದ್ದಾನೆ. ಈ ಸಂಬಂಧ ಸಂತ್ರಸ್ತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸದ್ಯ ವೀರೇಂದ್ರಬಾಬುನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದೆಡೆ ಆರೋಪಿ ಈ ಹಿಂದೆ ಸಿನಿಮಾ ನಿರ್ಮಾಣ ಮಾಡುತ್ತೇನೆ. ಚುನಾವಣೆಯಲ್ಲಿ ಕೆಲ ಪಕ್ಷಗಳಿಂದ ಟಿಕೆಟ್ ಕೊಡಿಸುತ್ತೇನೆ ಎಂದು ೧ ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ಬಂಧಿಸಲಾಗಿತ್ತು. ಆಗ ಈತನ ವಿರುದ್ಧ ಬಸವರಾಜು ಘೋಷಾಲ್ ಎಂಬುವವರು ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.