

ಶಿವಮೊಗ್ಗ: ನಗರ ಪಾಲಿಕೆ ವಿಸ್ತರಣೆಗೆ ಪ್ರಕ್ರಿಯೆ ಆರಂಭವಾಗಿದೆ. ಶಿವಮೊಗ್ಗ ನಗರ, ಗ್ರಾಮಾಂತರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳ ಒಟ್ಟು 9 ಗ್ರಾಪಂಗಳ 19 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ಮಂಗಳವಾರ ಅಧಿಕಾರಿಗಳ ತಂಡ ಇದರ ಬಗ್ಗೆ ಸಮಾಲೋಚನೆ ನಡೆಸಿದೆ.
ಅಧಿಕಾರಿಗಳ ಸಮಾಲೋಚನೆ ಬಳಿಕ ಇದೀಗ ಜನಪ್ರತಿನಿಧಿಗಳ ಅಭಿಪ್ರಾಯ ಕೇಳಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ, ಸಂಬಂಧಪಟ್ಟ ಕ್ಷೇತ್ರಗಳ ಶಾಸಕರು, ಸಂಬಂಧಪಟ್ಟ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರ ಅಭಿಪ್ರಾಯ ಆಲಿಸಿ 15 ದಿನಗಳೊಳಗೆ ವರದಿ ನೀಡುವಂತೆ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ 20 ವರ್ಷಗಳಿಂದ ನಗರಸಭೆ ಅವಧಿಯಿಂದಲೂ ಶಿವಮೊಗ್ಗ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಿಸ್ತರಣೆಯಾಗಿಲ್ಲ. 1993ರಲ್ಲಿ ಪಾಲಿಕೆ ವ್ಯಾಪ್ತಿಯನ್ನು ಗುರುತಿಸುವ ಕಾರ್ಯ ನಡೆದಿತ್ತು. ಒಂದು ದಶಕದಿಂದೀಚೆಗೆ ಕೃಷಿ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿರುವ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಿರುವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಬಗ್ಗೆ ಸರ್ಕಾರ ಮಾರ್ಗದರ್ಶನ ನೀಡಿತ್ತು ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ತಹಸೀಲ್ದಾರ್ ರಾಜೀವ್, ಪಾಲಿಕೆ ಕಂದಯಾಧಿಕಾರಿ ನಾಗೇಂದ್ರಪ್ಪ ಮುಂತಾದವರು ಸಭೆಯಲ್ಲಿದ್ದರು.