ಅರ್ಜಿ ನೋಂದಣಿಗೆ ಪರದಾಟ, ಗೃಹಲಕ್ಷ್ಮಿಯರಿಗೆ ಸಂಕಷ್ಟ: ಫಲಾನುಭವಿಗಳಿಗೆ ಯೋಜನೆ ಪ್ರಯೋಜನ ಕೈತಪ್ಪುವ ಆತಂಕ

Gruha Lakshmi Scheme
Published on

| ತಿಪ್ಪಣ್ಣ ಅವಧೂತ ಹುಬ್ಬಳ್ಳಿ

ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಆರಂಭದಲ್ಲೇ ವಿಘ್ನ ಕಾಡಿದೆ. ದಿನವೊಂದಕ್ಕೆ ಒಂದು ಕೇಂದ್ರದಿಂದ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸುವಂತೆ ಸುತ್ತೋಲೆ ಹೊರಡಿಸಿದ್ದ ಸರ್ಕಾರದ ನಿರ್ಧಾರದಿಂದ ‘ಗೃಹಲಕ್ಷ್ಮಿಯರು’ ಸಹನೆ ಕಳೆದುಕೊಂಡಿದ್ದಾರೆ. 60 ಅರ್ಜಿ ಸ್ವೀಕರಿಸುವ ಕೇಂದ್ರದಲ್ಲಿ 200-300 ಮಹಿಳೆಯರು ನೋಂದಣಿಗೆ ತೆರಳಿರುವುದರಿಂದ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಈ ಸಮಸ್ಯೆ ಉಂಟಾಗಿದ್ದರಿಂದ ಒಂದು ದಿನದ ನಂತರ ಸರ್ಕಾರ ನಿಯಮ ಬದಲಾಯಿಸಿದ್ದು, ದಿನದ ನೋಂದಣಿ ಮಿತಿಯನ್ನು ತೆರವುಗೊಳಿಸಿದೆ.

ಇನ್ನು ಗೃಹಲಕ್ಷ್ಮಿ ಯೋಜನೆಗಾಗಿ ನೋಂದಣಿ ಮಾಡಿಸಲು ಮುಂದಿನ ವರ್ಷ ಬರುವಂತೆ ಸರ್ಕಾರ ತಿಳಿಸಿದೆ. ಮೊಬೈಲ್​ಗೆ ನೋಂದಣಿ ವೇಳಾಪಟ್ಟಿಯ ಸಂದೇಶ ಬಾರದಿದ್ದವರು ಸರ್ಕಾರ ನೀಡಿರುವ 1902 ಅಥವಾ 8147500500 ನಂಬರ್​ಗೆ ಪಡಿತರ ಕಾರ್ಡ್ ಸಂಖ್ಯೆಯನ್ನು ಎಸ್​ಎಂಎಸ್ ಮಾಡಿ ತಾವು ನೋಂದಾಯಿಸುವ ಸ್ಥಳ, ಸಮಯವನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ, ಎಸ್​ಎಂಎಸ್ ಮಾಡಿದ ಕೆಲವರಿಗೆ 2024ರ ಜನವರಿ ಮತ್ತು ಫೆಬ್ರವರಿಗೆ ಬಂದು ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಿ ಎಂದು ಎಸ್​ಎಂಎಸ್ ಬರುತ್ತಿವೆ. ಒಂದು ವೇಳೆ 2024ರಲ್ಲಿ ನೋಂದಣಿ ಮಾಡಿಸಿಕೊಳ್ಳುವಂತಾದರೆ ಕನಿಷ್ಠ ಐದಾರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ. ಅಂದರೆ ಸುಮಾರು 10ರಿಂದ 12 ಸಾವಿರ ರೂ. ಫಲಾನುಭವಿಗಳಿಗೆ ನಷ್ಟವಾಗುತ್ತದೆ. ಹೀಗಾಗಿ, ಸರ್ಕಾರ ನೋಂದಣಿಯ ದಿನಾಂಕವನ್ನು ಮತ್ತೊಮ್ಮೆ ಪರಿಶೀಲಿಸಿ ಆಗಸ್ಟ್ ತಿಂಗಳಾಂತ್ಯದೊಳಗೆ ಖಾತೆಗೆ ಹಣ ಜಮಾ ಆಗುವಂತೆ ಮಾಡಬೇಕೆಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.

ಸರ್ಕಾರ ನೀಡಿರುವ ಟೋಲ್ ಫ್ರೀ ನಂಬರ್​ಗೆ ಪಡಿತರ ಚೀಟಿ ಸಂಖ್ಯೆಯನ್ನು ಎಸ್​ಎಂಎಸ್ ಮಾಡಿದರೆ, ನೋಂದಣಿಯ ದಿನಾಂಕ ಹಾಗೂ ಸ್ಥಳ ಬರುತ್ತಿಲ್ಲ. ನಾವು ಆನ್​ಲೈನ್ ಮೂಲಕ ಪರಿಶೀಲಿಸಿದರೆ, ಜನವರಿ 2024ರಲ್ಲಿ ಬಂದು ನೋಂದಣಿ ಮಾಡಿಸಿ ಅಂತ ತೋರಿಸುತ್ತಿದೆ. ಹೀಗಾದರೆ, ಐದಾರು ತಿಂಗಳು ನಮಗೆ ಗೃಹಲಕ್ಷ್ಮಿ ಹಣ ನಷ್ಟವಾಗುತ್ತದೆ. ಕೂಡಲೇ ಸರ್ಕಾರ ನೋಂದಣಿಯ ದಿನಾಂಕವನ್ನು ತಿದ್ದುಪಡಿ ಮಾಡಬೇಕು. | ಸುನೀತಾ ಬನ್ನಿಕೊಪ್ಪ, ಫಲಾನುಭವಿ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಗುರುವಾರದವರೆಗೂ ಒಂದು ಕೇಂದ್ರದಲ್ಲಿ ದಿನಕ್ಕೆ 60ರಂತೆ ಮಿತಿ ಹೇರಲಾಗಿತ್ತು. ಹೀಗಾಗಿ, ಕೆಲವರಿಗೆ 2024ರವರೆಗೆ ನೋಂದಣಿ ದಿನಾಂಕ ಬಂದಿರಬಹುದು. ಇಂದು ಆ ಮಿತಿ ರದ್ದುಪಡಿಸಲಾಗಿದೆ. ಇನ್ನು ಮುಂದೆ ಯಾರು ಎಲ್ಲಿ, ಯಾವಾಗಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು. | ಅನ್ನಪೂರ್ಣ ಮುದುಕಮ್ಮನವರ, ಎಡಿಸಿ

ಅಂಗನವಾಡಿ ಶಿಕ್ಷಕಿಯರಿಗೆ ಹೊರೆ ಗ್ಯಾರಂಟಿ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಘೊಷಣೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರ ದಾಖಲೆಗಳನ್ನು ಸಂಗ್ರಹಿಸುವ ಹೊರೆ ಅಂಗನವಾಡಿ ಶಿಕ್ಷಕಿಯರ ಹೆಗಲೇರಿದೆ.

ಹಲವು ಕಾರ್ಯಗಳ ನಡುವೆಯೂ ಅಂಗನವಾಡಿ ಶಿಕ್ಷಕಿಯರಿಗೆ ಮತ್ತೊಂದು ಹೊರೆ ಹೊರೆಸಿರುವ ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜು. 6ರಿಂದ ಈ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭವಾಗಿದ್ದು, ಅಂಗನವಾಡಿ ಶಿಕ್ಷಕಿಯರು ಪ್ರತಿ ಮನೆಗೆ ತೆರಳಿ ಫಲಾನುಭವಿಗಳ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಸದ್ಯ ಅಂಗನವಾಡಿ ಶಿಕ್ಷಕಿಯರಿಗೆ ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ವಿುಸಿ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು. ಅವರಿಗೆ ಊಟದ ಜತೆಗೆ ಪಾಠದಲ್ಲಿ ಆಸಕ್ತಿ ಮೂಡಿಸುವುದು. ಗರ್ಭಿಣಿ, ಬಾಣಂತಿಯರ ಎಂಟ್ರಿ, ಅವರಿಗೆ ರೇಷನ್ ವಿತರಿಸುವುದು. ಅವರ ಹಾಗೂ ಮಕ್ಕಳ ತೂಕ ಮಾಡುವುದು ಈ ಎಲ್ಲ ಕೆಲಸಗಳನ್ನು ಜಿಪಿಎಸ್ ಮೂಲಕ ಫೋಟೋ ತೆಗೆದು ಅಪ್​ಲೋಡ್ ಮಾಡಬೇಕು. ಜತೆಗೆ ಕಂದಾಯ ಹಾಗೂ ಆರೋಗ್ಯ ಇಲಾಖೆಯ ಕೆಲ ಕಾರ್ಯಕ್ರಮಗಳಲ್ಲಿ ಶಿಕ್ಷಕಿಯರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈಗ ಎಚ್​ಎನ್​ಎಸ್ (ಹೆಲ್ತ್ ಆಂಡ್ ನ್ಯೂಟ್ರಿಷನ್ ಸರ್ವೆ) ಕೆಲಸ ನೀಡಿರುವ ಆರೋಗ್ಯ ಇಲಾಖೆ ಆ ಸರ್ವೆಯಲ್ಲಿ ಮನೆ ನಂಬರ್, ಮನೆ ಹೇಗಿದೆ? ಮನೆಯಲ್ಲಿರುವವರ ಸಂಖ್ಯೆ, ಅವರ ಆರೋಗ್ಯ ಸ್ಥಿತಿ, ಮನೆಯಲ್ಲಿರುವವರಿಗೆ ಯಾವುದಾದರೂ ಕಾಯಿಲೆ ಇದೆಯಾ ಎಂಬ ಮಾಹಿತಿ ಸಂಗ್ರಹಿಸಿ ಅವರ ಮನೆ ಮುಂದೆ ನಿಂತು ಫೋಟೋ ತೆಗೆದು ಜಿಪಿಎಸ್ ಮೂಲಕ ಅಪ್​ಲೋಡ್ ಮಾಡಬೇಕಿದೆ.

ಗೃಹಲಕ್ಷ್ಮಿ ಯೋಜನೆಗಾಗಿ ಅಂಗನವಾಡಿ ವ್ಯಾಪ್ತಿಯ ಎಲ್ಲ ಮನೆಗೆ ತೆರಳುವ ಶಿಕ್ಷಕಿಯರು ಆ ಮನೆಯ ಯಜಮಾನಿ ಅಂದರೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯ ಆಧಾರ್ ಕಾರ್ಡ್, ಆಕೆಯ ಪತಿಯ ಆಧಾರ್ ಕಾರ್ಡ್, ಮಹಿಳೆಯ ಬ್ಯಾಂಕ್ ಪುಸ್ತಕ ಹಾಗೂ ರೇಷನ್ ಕಾರ್ಡ್​ನ

ನಕಲು ಪ್ರತಿಯನ್ನು ಎರಡು ಸೆಟ್​ಗಳಲ್ಲಿ ಪಡೆಯುತ್ತಿದ್ದಾರೆ. ಒಂದು ವೇಳೆ ಮಹಿಳೆಯ ಪತಿ ನಿಧನ ಹೊಂದಿದ್ದರೆ ಮರಣ ಪ್ರಮಾಣಪತ್ರ ಅಥವಾ ವಿಧವಾ ವೇತನದ ನಕಲು ಪ್ರತಿಯನ್ನು ಸಂಗ್ರಹ ಮಾಡುತ್ತಿದ್ದಾರೆ. ಹೀಗೆ ಸಂಗ್ರಹ ಮಾಡುವ ಮಾಹಿತಿಯ ಪ್ರತಿಗಳನ್ನು ಶಿಕ್ಷಕಿಯರು ಜು. 14ರಿಂದ ಆರಂಭವಾಗುವ ಅರ್ಜಿ ಸಲ್ಲಿಕೆಗೆ ಸಿದ್ಧತೆ ಮಾಡಿಟ್ಟುಕೊಳ್ಳುತ್ತಿದ್ದಾರೆ. ಸರ್ಕಾರ ಗೃಹಲಕ್ಷ್ಮಿ ಅರ್ಜಿಗಾಗಿ ಪ್ರತ್ಯೇಕ ಆಪ್ ಸಿದ್ಧಪಡಿಸಿದ್ದು, ಅಂಗನವಾಡಿ ಶಿಕ್ಷಕಿಯರಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡುತ್ತದೆ, ಆಗ ಶಿಕ್ಷಕಿಯರು ಅವರ ಲಾಗಿನ್ ಬಳಸಿಕೊಂಡು ಸಂಗ್ರಹ ಮಾಡಿಕೊಂಡ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬೇಕಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೂ ಮುನ್ನ ದಾಖಲೆ ಸಂಗ್ರಹಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅರ್ಜಿ ಸಲ್ಲಿಕೆ ಆರಂಭವಾದರೆ ಒಮ್ಮೆಲೆ ಎಲ್ಲರ ಮಾಹಿತಿ ಸಂಗ್ರಹ ಮಾಡಲು ಸಮಸ್ಯೆಯಾಗುತ್ತದೆ ಎಂದು ಈ ರೀತಿ ಆದೇಶ ನೀಡಿದ್ದಾರೆ. ಮಾಹಿತಿ ಸಂಗ್ರಹಿಸಿ ನಂತರ ಎಲ್ಲರ ಅರ್ಜಿಯನ್ನು ಅಂಗನವಾಡಿ ಶಿಕ್ಷಕಿಯರೇ ಹಾಕಬೇಕಿದೆ. ಇದರ ಜತೆಗೆ ಎಪಿಎಲ್, ಬಿಪಿಎಲ್ ಹಾಗೂ ಕಾರ್ಡ್ ಇಲ್ಲದವರ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದೇವೆ. | ಬಸಮ್ಮ ಹೂಲಿ, ಸಿಡಿಪಿಒ ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net