

| ಅವಿನಾಶ ಎಸ್. ಮೈಸೂರು
ಪ್ರಥಮ ದರ್ಜೆ ಸಹಾಯಕ ಹುದ್ದೆಗೆ (ಎಫ್ಡಿಎ) ಆಯ್ಕೆಯಾಗ ಬೇಕಾದರೆ ಕಾಲೇಜು ಹಂತದಲ್ಲಿ ವಿಜ್ಞಾನ ವಿಷಯವನ್ನೇ ಓದುವುದು ಕಡ್ಡಾಯವೇ? ಕಲಾ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಕಲಿತವರು ಎಫ್ಡಿಎ ಆಗಬಾರದೇ? ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು. ಏಕೆಂದರೆ, ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಶೇ. 45ರಿಂದ 50ರಷ್ಟು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ತುಂಬಿಹೋಗಿದ್ದವು. ವಿಜ್ಞಾನ ಕಲಿಯದ ಅಭ್ಯರ್ಥಿಗಳ ಪಾಲಿಗೆ ಈ ಪ್ರಶ್ನೆಪತ್ರಿಕೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗಣಿತ, ವಿಜ್ಞಾನ, ಪ್ರಚಲಿತ ವಿದ್ಯಮಾನ, ಸಂವಿಧಾನ, ಕಂಪ್ಯೂಟರ್ ಸೈನ್ಸ್ ಈ ರೀತಿ ಎಲ್ಲ ವಿಷಯಗಳಿಗೂ ಸಮಾನ ಅವಕಾಶ ನೀಡಿ ಪ್ರಶ್ನೆ ಪತ್ರಿಕೆ ರೂಪಿಸಬೇಕಾಗಿತ್ತು. ಆದರೆ ವಿಜ್ಞಾನ ವಿಷಯದಲ್ಲೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಿ, ಬೇರೆ ವಿಷಯಗಳ ಕನಿಷ್ಠ ಪ್ರಶ್ನೆಗಳನ್ನೂ ಕೇಳದೆ ಇರುವುದಕ್ಕೆ ಅಭ್ಯರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರಚಲಿತ ವಿದ್ಯಮಾನ ನಿರ್ಲಕ್ಷ್ಯ ಸಾಮಾನ್ಯ ಜ್ಞಾನ ವಿಷಯ ಪರೀಕ್ಷೆಯಲ್ಲಿ ಸದಾ ಪ್ರಚಲಿತ ವಿದ್ಯಮಾನಗಳೇ ಸಿಂಹಪಾಲು ಪಡೆಯುತ್ತಿದ್ದವು. ಆದರೆ, ಈ ಬಾರಿ ಅದಕ್ಕೆ ಅಪವಾದವಾಗಿತ್ತು. ಪ್ರಚಲಿತ ವಿದ್ಯಮಾನಗಳ ಮೇಲಿನ ಪ್ರಶ್ನೆಗಳು ಜೀವಶಾಸ್ತ್ರ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದ ಪ್ರಶ್ನೆಗಳಿಗಿಂತಲೂ ಕಡಿಮೆಯಿದ್ದವು. ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್, ರೈತ ಚಳವಳಿ, ಹೊಸ ಶಿಕ್ಷಣ ನೀತಿ, ಆರ್ಥಿಕ ಸಮೀಕ್ಷೆ, ಹೊಸ ಪುಸ್ತಕಗಳು, ಕ್ರೀಡೆ, ಪ್ರಶಸ್ತಿಗಳಂತಹ ವಿಷಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಹಿನ್ನಡೆ?: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೇ ವಿಷಯದ ಮೇಲೆ ಶೇ.40ಕ್ಕೂ ಹೆಚ್ಚಿನ ಪ್ರಶ್ನೆಗಳು ಮೂಡಿಬಂದರೆ ಇತರ ವಿಷಯ ಅಧ್ಯಯನ ಮಾಡಿರುವವರಿಗೆ ಕಷ್ಟವಾಗುತ್ತದೆ. ಈ ಬಾರಿಯ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 42 ಪ್ರಶ್ನೆಗಳು ವಿಜ್ಞಾನದ ಮೇಲೆಯೇ ಇದ್ದುದು ವಿಜ್ಞಾನ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾದರೆ, ಕಲಾ, ವಾಣಿಜ್ಯ ಹಿನ್ನೆಲೆ ಅಭ್ಯರ್ಥಿಗಳ ಹಿನ್ನಡೆಗೆ ನೇರ ಕಾರಣವಾಗುವ ಸಾಧ್ಯತೆ ಇದೆ. ಈ ಬಗ್ಗೆ ಫೇಸ್ಬುಕ್, ವಾಟ್ಸ್ಆಪ್ಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಪ್ರಶ್ನೆ ಪತ್ರಿಕೆ ಒಮ್ಮೆ ಸೋರಿಕೆಯಾಗಿದೆ ಎಂಬ ಮಾತ್ರಕ್ಕೆ ಇಷ್ಟೊಂದು ಕಷ್ಟವಾಗಿ ಪ್ರಶ್ನೆಪತ್ರಿಕೆ ರೂಪಿಸಿರುವ ಕೆಪಿಎಸ್ಸಿಗೆ ನಮ್ಮ ಧಿಕ್ಕಾರ. ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಓದಿದವರು ಸರ್ಕಾರಿ ಉದ್ಯೋಗ ಬಯಸುವುದೇ ತಪ್ಪೇ?, ಎಲ್ಲ ವಿಷಯಕ್ಕೂ ಪ್ರಾಮುಖ್ಯತೆ ನೀಡಬೇಕು.| ಹೆಸರು ಹೇಳಲು ಇಚ್ಛಿಸದ ಉದ್ಯೋಗಾಕಾಂಕ್ಷಿಪ್ರಶ್ನೆಪತ್ರಿಕೆ ನೋಡಿದ ತಕ್ಷಣ ನನಗೆ ಇದು ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯೋ ಅಥವಾ ಸೈಂಟಿಸ್ಟ್ಗಳ ಸಹಾಯಕರ ಪರೀಕ್ಷೆಯೋ ಎಂಬ ಅನುಮಾನ ಬಂದಿತು. ಕೆಪಿಎಸ್ಸಿ ಈ ರೀತಿಯಾಗಿ ಪ್ರಶ್ನೆಪತ್ರಿಕೆ ರೂಪಿಸಿರುವುದು ನನ್ನಂತಹ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ತೀವ್ರ ನಿರಾಸೆ ಮೂಡಿಸಿದೆ.| ಎಚ್.ಆರ್.ಚೇತನ್ಕುಮಾರ್ ಪರೀಕ್ಷಾರ್ಥಿಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ