

ಬೆಂಗಳೂರು:
ಕಿಸಾನ್ ಸಮ್ಮಾನ್ ಯೋಜನೆ, ಕ್ಷೀರ ಸಮೃದ್ಧಿ ಬ್ಯಾಂಕ್, ಗೋಶಾಲೆ ಯೋಜನೆಯನ್ನು ನಿಲ್ಲಿಸಿರುವುದರ ವಿರುದ್ದ ಬಿಜೆಪಿ ಪ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿತು.
ಬೆಂಗಳೂರು ಮಹಾನಗರ ರೈತ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಸರ್ಕಾರ, ರೈತರ ಯೋಜನೆಗಳನ್ನು ನಿರ್ಲಕ್ಷಿಸುತ್ತಿರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು,
ಎಪಿಎಂಸಿ ಕಾಯಿದೆ ಹಿಂಪಡೆಯಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಅನ್ನದಾತರಿಗೆ ಕಾಂಗ್ರೆಸ್ ಸರ್ಕಾರವು ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರೈತ ವಿರೋಧಿ ನೀತಿಗಳೇ ಜಾರಿಗೊಳ್ಳುತ್ತವೆ. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರವನ್ನು ಕೇಂದ್ರ, 4 ಸಾವಿರವನ್ನು ರಾಜ್ಯ ಬಿಜೆಪಿ ಸರಕಾರ ನೀಡುತ್ತಿತ್ತು. ಈಗ ರಾಜ್ಯ ನೀಡುವ ಮೊತ್ತವನ್ನು ನಿಲ್ಲಿಸಲಾಗಿದೆ. ವಿದ್ಯಾನಿಧಿ ಸೇರಿ ಅನೇಕ ಯೋಜನೆಗಳು ಸ್ಥಗಿತ ಮಾಡುವ ಮೂಲಕ ಜನರಿಗೆ ದ್ರೋಹ ಮಾಡಲಾಗಿದೆ ಎಂದರು.
ಕ್ಷೀರ ಸಮೃದ್ಧಿ ಬ್ಯಾಂಕ್ ಮತ್ತು ಗೋಶಾಲೆ ಯೋಜನೆ ಹಿಂಪಡೆಯಲಾಗಿದೆ. ರೈತರ ವಿರುದ್ಧ ನಿಲುವನ್ನು ಸಿದ್ದರಾಮಯ್ಯ ತೆಗೆದುಕೊಳ್ಳುತ್ತಿದ್ದಾರೆ.ರೈತರ ಪರವಾಗಿದ್ದ ಎಪಿಎಂಸಿ ಕಾಯ್ದೆಯನ್ನು ದಲ್ಲಾಳಿಗಳ ಪರವಾಗಿ ಪರಿವರ್ತಿಸಲಾಗಿದೆ ಎಂದು ಟೀಕಿಸಿದರು.
ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಈ ತನಕ ಆತ್ಮಹತ್ಯೆ ಮಾಡಿಕೊಂಡ ಒಬ್ಬರೇ ಒಬ್ಬ ರೈತರ ಮನೆಗೆ ಸಿಎಂ, ಸಚಿವರು ಹೋಗಿಲ್ಲ. ಕೃಷಿ ಇಲಾಖೆಯಲ್ಲಿ ಲಂಚ ಹೆಚ್ಚಾಗಿದೆ. ಎಲ್ಲ ಇಲಾಖೆಗಳಲ್ಲೂ ವ್ಯವಸ್ಥಿತವಾಗಿ ಲಂಚದ ಬೇಡಿಕೆ ಹೆಚ್ಚಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮತ್ತೋರ್ವ ಮಾಜಿ ಸಚಿವ ಸಿ.ಟಿ.ರವಿ, ದೇಶದಲ್ಲಿ ಮೋದ ಸರ್ಕಾರ ಜನಪರವಾದ ಆಡಳಿತ ನೀಡುತ್ತಿದ್ದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಸಕಾರ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಬಿಜೆಪಿ ಸಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಹಲವು ಜನಪರ ಯೋಜನೆಗಳಿಗೆ ತಿಲಾಂಜಲಿ ನೀಡುವ ಮೂಲಕ ರೈತರು, ಕಾರ್ಮಿಕರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೌಚಾಲಯ, ಮನೆ ನಿರ್ಮಾಣ ಸೇರಿ ಎಲ್ಲ ಯೋಜನೆಗಳು ಸ್ಥಗಿತವಾಗಿವೆ. ಬಿಜೆಪಿ ರೈತ ಪರವಾಗಿದ್ದರೆ, ಕಾಂಗ್ರೆಸ್ ಸರಕಾರವು ಯಾವತ್ತೂ ರೈತ ವಿರೋಧಿ ಎಂದು ದೂರಿದರು.
ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರೈತ ಮೋರ್ಚಾ ಮುಖಂಡರು ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.