

ಕೆ.ಎಂ.ದೊಡ್ಡಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ವತಿಯಿಂದ ಬುಧವಾರ ತಮಟೆ ಚಳವಳಿ ಹಾಗೂ ಪಂಜಿನ ಮೆರವಣಿಗೆ ನಡೆಯಿತು.
ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಡಾ.ಬಿ.ಆರ್. ಅಂಬೇಡ್ಕರ್ ಭವನದಿಂದ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ತಮಟೆ ಚಳವಳಿ ಹಾಗೂ ಪಂಜಿನ ಮೆರವಣಿಗೆ ನಡೆಸಿ ಅಮಿತ್ ಷಾ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಅಮಿತ್ ಷಾ ವಿರುದ್ಧ ಘೋಷಣೆಗಳನ್ನು ಕೂಗಿ ಅಮಿತ್ ಷಾ ಭಾವಚಿತ್ರ ಹಾಗೂ ಮನುಸ್ಮತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡ ಮಣಿಗೆರೆ ಕೆ.ಕಬ್ಬಾಳಯ್ಯ ಮಾತನಾಡಿ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ವಿರುದ್ಧ ಅವವೇಳನಕಾರಿಯಾಗಿ ಹೇಳಿಕೆ ನೀಡಿರುವ ಅಮಿತ್ ಷಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು, ಅಲ್ಲದೆ ದೇಶದ ಜನತೆಯ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಜೈಭೀಮ್ ದಲಿತ ಜಾಗೃತಿ ವೇದಿಕೆಯ ಅಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಮಾತನಾಡಿ, ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಸಮಾನತೆ, ಸ್ವಾತಂತ್ರ್ಯ ನೀಡಿ ನೈಜ ದೇವರಾಗಿದ್ದಾರೆ, ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಮನುಸ್ಮತಿಯ ದೃಷ್ಟಿಕೊನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ವಿರುದ್ಧ ಆಡಳಿತ ನಡೆಸುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಮತ್ತು ಅಂಬೇಡ್ಕರ್ ವಿರೋಧಿ ಅಮಿತ್ ಷಾ ಅವರನ್ನು ನರೇಂದ್ರ ಮೋದಿ ಅವರು ಕೂಡಲೇ ಸಂಪುಟದಿಂದ ಕೈಬಿಟ್ಟು ಸಂಸದ ಸ್ಥಾನದಿಂದ ವಜಾಗೊಳಿಸಿ ದೇಶದ್ರೋಹಿ ಕೇಸಿನಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡರಾದ ಅಮೀನ್ ಶಿವಲಿಂಗಯ್ಯ, ಕರಡಕೆರೆ ಯೋಗೇಶ್ ಕಾಡುಕೊತ್ತನಹಳ್ಳಿ ಚಿದಂಬರ ಮೂರ್ತಿ, ಮರಿಸ್ವಾಮಿ, ಕೆಂಪರಾಜು, ಈ.ರುದ್ರಯ್ಯ ಚಿಕ್ಕರಸಿನಕೆರೆ ಜಾಣಪ್ಪ, ಮುಡಿನಹಳ್ಳಿ ತಿಮ್ಮಯ್ಯ, ಟಿ.ಬಿ. ಹಳ್ಳಿ ಸಂತೋಷ್, ಗುಡಿಗೆರೆ ಬಸವರಾಜು, ರಾಘವೇಂದ್ರ, ಬಸವರಾಜು ಬೊಪ್ಪಸಮುದ್ರ ಸಂತೋಷ, ಅನಿಲ್ ಕುಮಾರ್, ಮಡೇನಹಳ್ಳಿ ಸಿದ್ದರಾಮು, ದೇವಿರಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.