

ಬೆಂಗಳೂರು: ಉದ್ಯೋಗ, ಸಾಲ, ಡೇಟಿಂಗ್, ಮದುವೆ, ಗಿಫ್ಟ್... ಹೀಗೆ ಹಲವು ಆಮಿಷವೊಡ್ಡಿ ಜನರಿಗೆ ಮೋಸಮಾಡುವ ಜಾಲ ಸಕ್ರಿಯವಾಗಿದೆ. ಇಂತಹದ್ದೇ ವಂಚನೆಗೆ ಸಿಲುಕಿದ ಯುವತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರತಿಷ್ಠಿತ ಮೇಕಪ್ ಕಂಪನಿಯ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ವ್ಯಕ್ತಿ ಬಹುಮಾನದ ಆಮಿಷವೊಡ್ಡಿ 77 ಸಾವಿರ ರೂ. ವಂಚಿಸಿದ್ದಾನೆ. ಹಣ ಕಳೆದುಕೊಂಡ ಹೊಸಪಾಳ್ಯದ ವಿನುಶ್ರೀ ಕೊಟ್ಟ ದೂರಿನ ಮೇರೆಗೆ ರಾಕೇಶ್ ನಾಯ್ಕ ಎಂಬಾತನ ವಿರುದ್ಧ ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜು.21ರಂದು ವಿನುಶ್ರೀಗೆ ಕರೆ ಮಾಡಿದ ರಾಕೇಶ್ ಎಂಬಾತ ಪ್ರತಿಷ್ಠಿತ ಮೇಕಪ್ ಕಂಪನಿಯ ನೌಕರನೆಂದು ಪರಿಚಯಿಸಿಕೊಂಡಿದ್ದ. ಕಂಪನಿ ಗ್ರಾಹಕರಿಗೆ ಪ್ರತಿವರ್ಷ ಬಹುಮಾನ ನೀಡುತ್ತದೆ. ಈ ವರ್ಷ ನೀವು ವಿಜೇತರಾಗಿದ್ದೀರಿ ಎಂದು ಯುವತಿಗೆ ಹೇಳಿದ್ದ. ಬಹುಮಾನವನ್ನು ಮನೆಗೆ ಪಾರ್ಸಲ್ ಕಳುಹಿಸುವುದಾಗಿ ಹೇಳಿ ವಿಳಾಸ ಪಡೆದುಕೊಂಡಿದ್ದ.
ಆ.1ರಂದು ವಿನುಶ್ರೀ ಅವರ ಮನೆಗೆ ಕೋರಿಯರ್ ಬಂದಿತ್ತು. ಕೋರಿಯರ್ನಲ್ಲಿದ್ದ ಪತ್ರದಲ್ಲಿ ವಿಳಾಸ ಪರಿಶೀಲನೆ ಪತ್ರವಾಗಿದೆ ಎಂದು ಬರೆದಿತ್ತು. ಇದಾದ ಬಳಿಕ ಮತ್ತೆ ಕರೆ ಮಾಡಿದ್ದ ರಾಕೇಶ್, ಕಂಪನಿ ಬಹುಮಾನ ಪಡೆದುಕೊಳ್ಳಲು ಶುಲ್ಕ ಪಾವತಿಸಬೇಕು ಎಂದಿದ್ದ. ಆತನ ಮಾತನ್ನು ನಂಬಿದ ಮಹಿಳೆ 77 ಸಾವಿರ ರೂ. ಬ್ಯಾಂಕ್ ಖಾತೆಗೆ ಸಂದಾಯ ಮಾಡಿದ್ದರು. ಹಣ ಜಮೆ ಮಾಡಿದ ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ಮೋಸ ಆಗಿರುವುದು ಗೊತ್ತಾಗಿ ಯುವತಿ ದೂರು ಕೊಟ್ಟಿದ್ದಾರೆ.