

ನೆಲಮಂಗಲ: ಶುಕ್ರವಾರ ತಡರಾತ್ರಿ 70ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ರೌಡಿಶೀಟರ್ಗಳಿಗೆ ಎಸ್ಪಿ ರವಿ ಡಿ. ಚನ್ನಣ್ಣನವರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆ ಸೇರಿದಂತೆ 5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಡೆ ಮಂಜ, ಹುಸ್ಕೂರು ಶಿವ, ಬೆತ್ತನಗೆರೆ ಮಂಜ, ಪಾಯಜ಼ನ್ ರಾಮ, ಕಾಸಿಮ್, ಶರವಣ, ಚೇಣಿ, ನಾಗರಾಜ, ರವಿ, ನಿಂಗೇಗೌಡ, ಹರೀಶ, ಮಹದೇವ ಸೇರಿದಂತೆ ಹಲವು ರೌಡಿಶೀಟರ್ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಅದೇಶದ ಮೇರೆಗೆ ನೆಲಮಂಗಲ ಉಪವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇತ್ತೀಚೆಗೆ ನೆಲಮಂಗಲ ಉಪವಿಭಾಗದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಗುಂಪುಗಾರಿಕೆ, ಬಡ್ಡಿ ದಂಧೆ, ಇಸ್ಪೀಟು ಅಡ್ಡೆಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಹಾಳು ಮಾಡುವ ಕೃತ್ಯಗಳಲ್ಲಿ ರೌಡಿಶೀಟರ್ಗಳು ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಇಂದು(ಶನಿವಾರ) ಬೆಳಗ್ಗೆ 100ಕ್ಕೂ ಹೆಚ್ಚು ರೌಡಿಶೀಟರ್ಗಳಿಗೆ ಪರೇಡ್ ನಡೆಸಿದ ರವಿ ಡಿ. ಚನ್ನಣ್ಣನವರ್, ಇನ್ಮುಂದೆ ಯಾವುದೇ ಅಪರಾಧ ಕೃತ್ಯಗಳು, ದರೋಡೆ, ಸುಲಿಗೆ, ಕಿಡ್ನ್ಯಾಪ್ ಕೇಸ್ ಗಳಲ್ಲಿ ಭಾಗಿಯಾದರೆ ಗೂಂಡ ಕಾಯ್ದೆಯಡಿ ಗಡಿಪಾರು ಮಾಡುವುದಾಗಿ ಎಚ್ಚರಿಸಿದ್ದಾರೆ.
ರೌಡಿಗಳ ಪರೇಡ್ನಲ್ಲಿ ನೆಲಮಂಗಲ ಉಪವಿಬಾಗ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕರಾದ ಶಿವಣ್ಣ, ಸತ್ಯನಾರಯಣ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.