

ಲಖನೌ: ಉತ್ತರ ಪ್ರದೇಶದ ಉಸ್ತುವಾರಿಯಾಗಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಪ್ರಧಾನ ಕಾರ್ಯದರ್ಶಿಯಾದ ನಂತರ ಉತ್ತರ ಪ್ರದೇಶ ರಾಜಕಾರಣದಲ್ಲಿ ಸಕ್ರಿಯವಾಗಿರುವ ಪ್ರಿಯಾಂಕಾರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂಬ ಕೂಗು ಕಾಂಗ್ರೆಸ್ ರಾಜ್ಯ ಘಟಕ ಮತ್ತು ಇನ್ನಿತರ ಮುಂಚೂಣಿ ವಿಭಾಗಗಳಿಂದ ಬಲವಾಗಿ ಕೇಳಿಬರುತ್ತಿದೆ.
ಪ್ರಿಯಾಂಕಾರ ನೇತೃತ್ವದಲ್ಲಿ 2022ರ ಚುನಾವಣೆ ಎದುರಿಸುಲು ಪೂರ್ಣಪ್ರಮಾಣದ ಅಭಿಯಾನವನ್ನು ಎರಡು ವಾರದ ನಂತರ ಆರಂಭಿಸಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಸುರೇಂದ್ರ ರಜಪೂತ್ ತಿಳಿಸಿದ್ದಾರೆ. ಪಕ್ಷದ ಸಂಸ್ಥಾಪನ ದಿನವನ್ನು ಅದ್ದೂರಿಯಾಗಿ ಆಚರಿಸಲು ಹೈಕಮಾಂಡ್ ಯೋಜನೆ ರೂಪಿಸುತ್ತಿದ್ದು, ಉತ್ತರ ಪ್ರದೇಶವನ್ನು ವಿಶೇಷವಾಗಿ ಕೇಂದ್ರೀಕರಿಸುತ್ತಿದೆ. ಪ್ರಿಯಾಂಕಾರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕೆ ಅಥವಾ ಚುನಾವಣೆಯ ತಾರಾ ಪ್ರಚಾರಕಿಯನ್ನಾಗಷ್ಟೆ ಇರಿಸಿಕೊಳ್ಳಬೇಕೆ ಎಂಬ ಗೊಂದಲದಲ್ಲಿ ಹೈಕಮಾಂಡ್ನಲ್ಲಿದೆ. ತಾಯಿ ಸೋನಿಯಾ ಗಾಂಧಿಯ ರಾಯ್ಬರೇಲಿ ಮತ್ತು ಸೋದರ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದ ಅಮೇಠಿ ಕ್ಷೇತ್ರದಲ್ಲಿ ಚುನಾವಣೆ ಕಾಲದಲ್ಲಿ ಸಕ್ರಿಯರಾಗುತ್ತಿದ್ದ ಪ್ರಿಯಾಂಕರನ್ನು, 2019ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ನೇಮಿಸಲಾಯಿತು.