ಬ್ರಿಟಿಷ್ ಕೌನ್ಸಿಲ್ ಕಾರ್ನರ್‌ಗೆ ಪ್ರಿಯಾಂಕ್ ಖರ್ಗೆ ಚಾಲನೆ| British Council Corner

p (3)
Published on

ಬೆಂಗಳೂರು: ಗ್ರಾಮೀಣ ಸಮುದಾಯಗಳನ್ನು ಶಿಕ್ಷಣದ ಮೂಲಕ ಸಬಲೀಕರಣಗೊಳಿಸುವ ಉದ್ದೇಶದಿಂದ ಭೌತಿಕ ಮತ್ತು ಡಿಜಿಟಲ್ ಕಲಿಕಾ ಸಾಧನಗಳೊಂದಿಗೆ ಅರಿವು ಕೇಂದ್ರಗಳನ್ನು ಸಬಲೀಕರಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರ್ರಿಯಾಂಕ್ ಖರ್ಗೆ(Priyank Kharge) ಹೇಳಿದರು.

ತಮ್ಮ ಕಚೇರಿಯಲ್ಲಿ ಬ್ರಿಟಿಷ್ ಕೌನ್ಸಿಲ್ ಕಾರ್ನರ್‌ಗೆ ಚಾಲನೆ(Priyank Kharge Drive to British Council Corner) ನೀಡಿ ಮಾತನಾಡಿದ ಅವರು, ಅರಿವು ಕೇಂದ್ರಗಳ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಇಂಗ್ಲಿಷ್ ಭಾಷಾ ಕಲಿಕೆಗೆ ಅವಕಾಶ ಕಲ್ಪಿಸಲು ಬ್ರಿಟಿಷ್ ಕೌನ್ಸಿಲ್ ಮುಂದಾಗಿದೆ ಎಂದರು.

ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯಿಂದ ರಾಜ್ಯದ ಆಯ್ದ 10 ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಿಗೆ 500 ಮಕ್ಕಳ ಪುಸ್ತಕಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಅರಿವು ಕೇಂದ್ರಗಳಲ್ಲಿ ಭೌತಿಕವಾಗಿ ಪುಸ್ತಕ ಸಂಗ್ರಹದ ವಿಸ್ತರಣೆ ಜೊತೆಗೆ, ರಾಜ್ಯದ 5,000 ಗ್ರಾಮೀಣ ಅರಿವು ಕೇಂದ್ರಗಳಿಗೆ ಬ್ರಿಟಿಷ್ ಕೌನ್ಸಿಲ್ ಡಿಜಿಟಲ್ ಲೈಬ್ರರಿ ಪ್ರಿಮಿಯಂ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶವನ್ನು ಒದಗಿಸಿದೆ. ಬ್ರಿಟಿಷ್ ಕೌನ್ಸಿಲ್ ನ ಡಿಜಿಟಲ್ ಲೈಬ್ರರಿ ಸಂಪನ್ಮೂಲ ಬಳಕೆಯಿಂದ ಓದುಗರು/ವೀಕ್ಷಕರು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ 5888 ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 5767 ಅರಿವು ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ಕರೊನಾ ಪಿಡುಗು ತೀವ್ರವಾಗಿದ್ದ ಸಂದರ್ಭದಲ್ಲಿ ಮಕ್ಕಳು ಓದುವ ಅಭ್ಯಾಸದಿಂದ ದೂರ ಉಳಿಯಬಾರದೆಂದು 14 ನವಂಬರ್ 2020ರಿಂದ ಓದುವ ಬೆಳಕು ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. 6 ರಿಂದ 18 ವರ್ಷದ ಮಕ್ಕಳಿಗೆ ಗ್ರಂಥಾಲಯದ ಉಚಿತ ಸದಸ್ಯತ್ವವನ್ನು ನೀಡಿ ಅವರು ಮನೆಗೆ ಪುಸ್ತಕ ತೆಗೆದುಕೊಂಡು ಹೋಗಿ ಓದಲು ಅವಕಾಶವನ್ನು ಕಲ್ಪಿಸಲಾಯಿತು. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳುವ ಹಾಗೂ ಓದುವ ಹವ್ಯಾಸವನ್ನು ಪ್ರೋತ್ಸಾಹಿದ್ದರ ಪರಿಣಾಮವಾಗಿ ಇಂದು ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ 50ಲಕ್ಷಕ್ಕೂ ಹೆಚ್ಚು ಮಕ್ಕಳು ನೋಂದಾತರಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮತ್ತು ಅಂಜುಂ ಪರ್ವೇಜ್ , ಕರ್ನಾಟಕ ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯ ಜನಕ ಪುಷ್ಪನಾಥನ್, ಮೇಘಾ ಕಕ್ಕರ್, ಅನಿತಾ ಶಿವಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net