

ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳಿಗೆ ಅನುಗುಣವಾಗಿ ಕುಲಪತಿಗಳ ನೇಮಕ ಮಾಡಲಾಗಿದೆಯೇ ಎಂದು ವಿವರ ಕೇಳಿ ರಾಜ್ಯದ 25 ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಇಲಾಖೆಯು ನೋಟಿಸ್ ಜಾರಿ ಮಾಡಿದೆ.
ಯುಜಿಸಿ ನಿಯಮಗಳ ಪ್ರಕಾರ, ಯುಜಿಸಿ ಕಲಂ 16ರ ಪ್ರಕಾರ ನೇಮಕ ಮಾಡಬೇಕು. ಹೀಗಾಗಿ, ಕುಲಪತಿಗಳ ವಿದ್ಯಾರ್ಹತೆ, ಸೇವಾ ಅನುಭವ ಮತ್ತು ಕುಲಪತಿಗಳಾಗಿ ನೇಮಕ ಮಾಡಲು ಅನುಸರಿಸಿರುವ ನಿಯಮಗಳು, ಯಾವಾಗ ಅವರ ನೇಮಕ ಮಾಡಲಾಗಿದೆ ಎಂಬ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದೆ.
ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಶೈಕ್ಷಣಿಕ ಅರ್ಹತೆ, ಸೇವಾ ಅನುಭವಗಳನ್ನು ಕಡೆಗಣಿಸಿ ಆಡಳಿತ ಮಂಡಳಿಗಳ ಕುಟುಂಬದವರಿಗೆ ಹುದ್ದೆಗಳನ್ನು ನೀಡಲಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ನಿಯಮಗಳಿಗೆ ವಿರುದ್ಧವಾಗಿ ಕುಲಪತಿಗಳನ್ನು ನೇಮಿಸಿದರೆ, ತಕ್ಷಣ ಅವರನ್ನು ಬದಲಿಸಬೇಕು. ನಿಯಮಾನುಸಾರ ಅರ್ಹರಿಗೆ ಹುದ್ದೆ ನೀಡಬೇಕು. ಈ ಕುರಿತು ಪದವಿ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ.