ಖಾಸಗಿ ಸಾರಿಗೆ ಮುಷ್ಕರ; ಬಿಜೆಪಿ, ಕಾಂಗ್ರೆಸ್ ನಡುವೆ 'ನೈತಿಕತೆ' ಜಟಾಪಟಿ

BJP vs Congress
Published on

ಬೆಂಗಳೂರು: 'ಶಕ್ತಿ ಯೋಜನೆ'ಗೆ ಪರ್ಯಾಯ ಪರಿಹಾರ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಖಾಸಗಿ ಸಾರಿಗೆ ಮಾಲೀಕರು, ಚಾಲಕರು ಹಾಗೂ ಆಟೋ ಚಾಲಕರ ಮುಷ್ಕರದ ಬಿಸಿಗೆ ಜನ-ಸಾಮಾನ್ಯರು ಹೈರಾಣಾಗಿ ಸರ್ಕಾರದೆಡೆ ಕೆಂಗಣ್ಣು ಬೀರಿದ್ದಾರೆ. ಈ ಮುಷ್ಕರದ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ 'ನೈತಿಕತೆ' ಜಟಾಪಟಿಯೂ ನಡೆದಿದೆ.

ಖಾಸಗಿ ಸಾರಿಗೆ ಮುಷ್ಕರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನೈತಿಕ ಬೆಂಬಲ ವ್ಯಕ್ತಪಡಿಸಿ, ಖಾಸಗಿ ಸಾರಿಗೆ ಮಾಲೀಕರು ಹಾಗೂ ಚಾಲಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದ್ದಾರೆ. ಮುಂಚಿತವಾಗಿ ಎಚ್ಚರಿಸಿದ್ದರೂ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿತ್ತು ಎಂದು ಪರೋಕ್ಷವಾಗಿ ತಿವಿದಿದ್ದಾರೆ.

ಖಾಸಗಿ ಸಾರಿಗೆ ಮುಷ್ಕರಕ್ಕೆ ನೈತಿಕ ಬೆಂಬಲ ಸೂಚಿಸುವ ನೈತಿಕತೆಯೇ ಬಿಜೆಪಿಗೆ ಇಲ್ಲ‌. ಖಾಸಗಿ ಸಾರಿಗೆ ಮಾಲೀಕರು ಹಾಗೂ ಚಾಲಕರ ಪರವಾಗಿ ಕಾಂಗ್ರೆಸ್ ಸರ್ಕಾರವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದು, ಬಿಜೆಪಿಯ ತುಟಿಯಂಚಿನ ಅನುಕಂಪದಿಂದ ಪ್ರಯೋಜನವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮುಷ್ಕರ ನಿರತರ ಶಕ್ತಿ ಯೋಜನೆಗೆ ಸಂಬಂಧಿಸಿದ ಬೇಡಿಕೆ ಮಾತ್ರ ಈಗಿನದು. ಉಳಿದ 28 ಬೇಡಿಕೆಗಳು ನಾಲ್ಜೈದು ವರ್ಷಗಳಿಂದ ಈಡೇರಿಸಿಲ್ಲ. ಶಕ್ತಿಗೆ ಪರಿಹಾರ, ಖಾಸಗಿ ಬಸ್ ಗಳಿಗೂ ವಿಸ್ತರಣೆ ಬೇಡಿಕೆ ಈಡೇರಿಸಲು ಐದಾರು ಸಾವಿರ ಕೋಟಿ ರೂ. ಬೇಕಾಗುತ್ತದೆ. ಶಕ್ತಿ ಯೋಜನೆಗೆ ಸರ್ಕಾರದ ವಾರ್ಷಿಕ ವೆಚ್ಚವೇ 3,800 ಕೋಟಿ ರೂ.ಗಳಷ್ಟಿದೆ. ಅದಕ್ಕಿಂತ ಹೆಚ್ಚಿನ ಮೊತ್ತದ ಬೇಡಿಕೆ ಕಾರ್ಯಸಾಧುವಲ್ಲ. ಉಳಿದ ಬೇಡಿಕೆಗಳನ್ನು ಅಧಿಕಾರದಲ್ಲಿದ್ದ ಬಿಜೆಪಿ ಈಡೇರಿಸಲಿಲ್ಲವೇಕೆ ? ಈಗ ನೈತಿಕ ಬೆಂಬಲ ಸೂಚಿಸುವುದಕ್ಕೆ ಯಾವ ನೈತಿಕತೆಯಿದೆ ? ಎಂದು ರಾಮಲಿಂಗಾರೆಡ್ಡಿ ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net