

ಬೆಂಗಳೂರು ಮಾನ್ಯತೆ ನವೀಕರಣ ವಿಚಾರವಾಗಿ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಆ.15ರಂದು ‘ಕರಾಳ ಸ್ವಾತಂತ್ರ್ಯ ದಿನ’ವನ್ನು ಆಚರಿಸುವ ನಿರ್ಧಾರದಿಂದ ಖಾಸಗಿ ಶಾಲೆಗಳು ಹಿಂದೆ ಸರಿದಿವೆ.
ಕರ್ನಾಟಕ ಖಾಸಗಿ ಶಾಲಾ ಬೋಧಕ, ಬೋಧಕೇತರ ವರ್ಗಗಳ ಸಮನ್ವಯ ಸಮಿತಿ ರಚಿಸಿರುವ ಕ್ಯಾಮ್ಸ್, ಕುಸ್ಮಾ, ಮಿಕ್ಸಾ ಸೇರಿ ಇತರೆ ಒಂಬತ್ತು ಖಾಸಗಿ ಶಾಲಾ ಸಂಘಟನೆಗಳು, ಮಾನ್ಯತೆ ನವೀಕರಣಕ್ಕೆ ವಿಧಿಸಿರುವ ಕಠಿಣ ಮಾನದಂಡಗಳ ಸಡಿಲಿಸಬೇಕೆಂಬುದು ಸೇರಿ ಖಾಸಗಿ ಶಾಲೆಗಳ ಬೇಡಿಕೆ, ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಆ.15ರಂದು ಕರಾಳ ದಿನ ಆಚರಿಸುವುದಾಗಿ ಘೋಷಿಸಿದ್ದವು. ಆದರೆ, ಇದಕ್ಕೆ ಪೋಷಕರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ನಗರದಲ್ಲಿ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಸಿ ತಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಭಟನೆ ಮಾಡುವುದಾದರೆ ಬೇರೆ ದಿನ ಮಾಡಿ ಸ್ವಾತಂತ್ರ್ಯ ದಿನ ಬೇಡ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಂಘಟನೆಗಳು ಹೋರಾಟವನ್ನು ಕೈಬಿಟ್ಟಿವೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಶಶಿಕುಮಾರ್, ಸಚಿವರ ಸಭೆಯಲ್ಲಿ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ, ಭೂ ಪರಿವರ್ತನೆ ವಿಚಾರ ಮಾತ್ರವಲ್ಲದೆ ಇನ್ನಿತರೆ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಲಾಯಿತು. ಇತರೆ ಇಲಾಖೆಗಳಿಂದ ವಿಧಿಸಿರುವ ಮಾನದಂಡಗಳ ಪರಿಷ್ಕರಣೆ ಕುರಿತು ಸಂಬಂಧಿಸಿದ ಸಚಿವರುಗಳೊಂದಿಗೆ ಸಮನ್ವಯ ಸಭೆ ನಡೆಸುತ್ತೇನೆ. ಯಾವ್ಯಾವ ಮಾನದಂಡಗಳಿಗೆ ಈ ವರ್ಷ ರಿಯಾಯಿತಿ ಕೊಡಬಹುದು ಎಂಬುದನ್ನು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಮಾನ್ಯತೆ ನವೀಕರಣಕ್ಕೆ ಇರುವ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಒಂದೆರಡು ತಿಂಗಳಲ್ಲಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ಕರಾಳ ದಿನ ಆಚರಣೆ ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.