

Private School Fee: ನಮ್ಮ ಮಕ್ಕಳನ್ನು ಒಂದೊಳ್ಳೆ, ಹೆಸರಾಂತ ಹಾಗೂ ಪ್ರತಿಷ್ಠಿತ ಶಾಲೆಗೇ ಸೇರಿಸಬೇಕು ಎಂಬ ಮಹಾದಾಸೆ ಅನೇಕ ಪೋಷಕರದ್ದು. ಅದರಲ್ಲೂ ಮಧ್ಯಮ ವರ್ಗದ ಜನರ ಮಹತ್ವದ ಕನಸಿದು. ಆದರೆ, ಹಣದ ಅಭಾವ ಈ ಆಸೆಗೆ ತಣ್ಣೀರು ಎರುಚುವುದು ತೀರ ಸಾಮಾನ್ಯ. ಕೆಲವರು ಮಾತ್ರ, ಸಾಲ ಮಾಡಿಯಾದರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಹಠದಲ್ಲಿ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತ್ತಾರೆ. ಆದರೆ, ಇಂದಿನ ಕಾಲಘಟ್ಟದಲ್ಲಿ ಕೇವಲ 1ನೇ ತರಗತಿಗೆ ಸೇರಿಸುವುದು ಕೂಡ ಅತ್ಯಂತ ಸವಾಲಿನ ಪರಿಸ್ಥಿತಿ ಎಂಬುದನ್ನು ಇದೊಂದು ವೈರಲ್ ಸ್ಕ್ರೀನ್‌ಶಾಟ್ ಮತ್ತೇ ನೆನಪಿಸಿದೆ.
'ಎನ್ಡಿಟಿವಿ' ವರದಿ ಪ್ರಕಾರ, ಬೆಂಗಳೂರಿನ ಪ್ರಮುಖ ಶಾಲೆಯೊಂದರ ಶುಲ್ಕದ ಸ್ಕ್ರೀನ್‌ಶಾಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಖಾಸಗಿ ಶಿಕ್ಷಣಕ್ಕೆ ತಗಲುತ್ತಿರುವ ವೆಚ್ಚಗಳ ಬಗ್ಗೆ ಹಲವರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಹಂಚಿಕೊಳ್ಳಲಾದ ಸ್ಕ್ರೀನ್ಶಾಟ್ನಲ್ಲಿ, 1ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಬೋಧನಾ ಶುಲ್ಕ ಬರೋಬ್ಬರಿ 7.35 ಲಕ್ಷ ರೂ. ಇದೆ. ಇನ್ನು 11-12ನೇ ತರಗತಿಗೆ 11 ಲಕ್ಷ ರೂ. ನಿಗದಿಪಡಿಸಿರುವುದು ಸದ್ಯ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದು ಸ್ಕೂಲ್ ಬಸ್, ಪುಸ್ತಕಗಳು, ಸಮವಸ್ತ್ರ ಅಥವಾ ಪಠ್ಯೇತರ ಚಟುವಟಿಕೆಗಳಂತಹ ಹೆಚ್ಚುವರಿ ವೆಚ್ಚಗಳನ್ನು ಹೊರತುಪಡಿಸಿ ನೀಡಿರುವ ಮೊತ್ತ ಎಂಬುದು ಗಮನಾರ್ಹ. ಇದನ್ನೂ ಸೇರಿಸಿ ನೋಡುವುದಾದರೆ, ವಾರ್ಷಿಕವಾಗಿ ಒಂದು ಮಗುವಿಗೆ ಒಟ್ಟು 8 ಲಕ್ಷ ರೂ. ಶುಲ್ಕ ತಗುಲಬಹುದು. ಸದ್ಯ ಈ ಸ್ಕ್ರೀನ್‌ಶಾಟ್ ವೈರಲ್ ಆಗ್ತಿದ್ದಂತೆ, ಜಾಲತಾಣಗಳಲ್ಲಿ ಹಲವರು ತೀವ್ರ ಆಕ್ಷೇಪ ಹೊರಹಾಕಿದ್ದಾರೆ. ಮಿಡಲ್ ಕ್ಲಾಸ್ ಜನರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ದೂರದ ಮಾತಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಒಬ್ಬರು, "ಸರ್, ಈ ಶಾಲೆಯು ಅತಿ ಶ್ರೀಮಂತ ಕುಟುಂಬದ ಮಕ್ಕಳಿಗಾಗಿ ಮಾತ್ರ. ನಾನೊಬ್ಬ ಮಧ್ಯಮ ವರ್ಗದ ವ್ಯಕ್ತಿಯಾಗಿ ಹೇಳುವುದಾದರೆ, ಸರ್ಕಾರಿ ಶಾಲೆಗಳಲ್ಲಿನ ಕಳಪೆ ವಾತಾವರಣದಿಂದಾಗಿ ನನ್ನ ಮಕ್ಕಳು ಅಲ್ಲಿ ಓದಬೇಕೆಂದು ನಾನು ಬಯಸುವುದಿಲ್ಲ. ಇದು ಪೋಷಕರ ಆಯ್ಕೆ" ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗೆ ಇನ್ನು ಹಲವರು ಅಭಿಪ್ರಾಯಿಸಿದ್ದು, ದುಬಾರಿ ಶುಲ್ಕ ವಿಧಿಸುವ ಶಾಲೆಗಳ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).