ಹಿಮಾಚಲ ಪ್ರದೇಶದಲ್ಲಿ ವರುಣನ ಅವಾಂತರ! ದುರಂತಗಳಲ್ಲಿ ಒಟ್ಟು 320 ಮಂದಿ ಸಾವು, 819 ರಸ್ತೆಗಳು ಬಂದ್ | ​Himachal Pradesh

ವಿಜಯವಾಣಿ (1)
Published on

​Himachal Pradesh: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರೀ ಹಾಗೂ ನಿರಂತರ ಮಳೆಗೆ ಹಿಮಾಚಲ ಪ್ರದೇಶ ಅಕ್ಷರಶಃ ತತ್ತರಿಸಿದೆ. ಮೇಘಸ್ಪೋಟ, ಭೂ ಕುಸಿತ, ಪ್ರವಾಹ ಸೇರಿದಂತೆ ಹಲವು ದುರಂತಗಳಲ್ಲಿ ಇಲ್ಲಿಯವರೆಗೆ ಒಟ್ಟು 320 ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ಮಾಹಿತಿ ಹಂಚಿಕೊಂಡಿದೆ.

ವಿಪರೀತ ಮಳೆಯ ಅಬ್ಬರಕ್ಕೆ ರಾಜ್ಯದ ಮೂಲಸೌಕರ್ಯಗಳು ಬಹುತೇಕ ಹಾನಿಗೊಳಗಾಗಿದೆ. ಮೂರು ರಾಷ್ಟ್ರೀಯ ಹೆದ್ದಾರಿಗಳು, 1,236 ವಿದ್ಯುತ್ ಪರಿವರ್ತಕಗಳು ಮತ್ತು 424 ನೀರು ಸರಬರಾಜು ಯೋಜನೆಗಳು ಸೇರಿ ಒಟ್ಟು ರಾಜ್ಯದ 819 ರಸ್ತೆಗಳು ಹಾನಿಯಾಗಿವೆ. ಪ್ರವಾಹದಲ್ಲಿ ಹಲವರು ಉಸಿರು ಚೆಲ್ಲಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜೂನ್ 20ರಿಂದ, ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ ಇದೀಗ 320ಕ್ಕೆ ಏರಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಇದರಲ್ಲಿ, 166 ಸಾವು ಭೂಕುಸಿತದಿಂದ, ಹಠಾತ್ ಪ್ರವಾಹ, ವಿದ್ಯುತ್ ಅವಘಡ, ಮಳೆ ಸಂಬಂಧಿತ ಘಟನೆಗಳಿಂದ ಸಂಭವಿಸಿದ್ದರೆ, 154 ಜನರ ದುರಂತ ಅಂತ್ಯ ರಸ್ತೆ ಅಪಘಾತಗಳಲ್ಲಿ ಸಂಭವಿಸಿವೆ ಎಂದು ವರದಿಯಾಗಿದೆ.

Image

ಇನ್ನು ರಾಜ್ಯದ ರಸ್ತೆ ಜಾಲವು ಭಾರೀ ಹಾನಿಗೊಂಡಿವೆ, ರಾಷ್ಟ್ರೀಯ ಹೆದ್ದಾರಿ-03, 05 ಮತ್ತು 305ರಲ್ಲಿ ಪ್ರಮುಖ ತೊಂದರೆಗಳು ವರದಿಯಾಗಿವೆ. ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ನೂರಾರು ಗ್ರಾಮೀಣ ಸಂಪರ್ಕ ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಚಂಬಾ (253 ರಸ್ತೆ), ಮಂಡಿ (206 ರಸ್ತೆ), ಕುಲ್ಲು (175 ರಸ್ತೆ) ಮತ್ತು ಕಾಂಗ್ರಾ (61 ರಸ್ತೆ) ಜಿಲ್ಲೆಗಳು ಹೆಚ್ಚು ಹಾನಿಗೆ ಒಳಪಟ್ಟಿವೆ ಎಂದು ಸುದ್ದಿ ಸಂಸ್ಥೆ 'ಎಎನ್​ಐ' (ANI) ತನ್ನ ವರದಿಯಲ್ಲಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net