ಮರಾಠ ಮೀಸಲಾತಿ; 3ನೇ ದಿನಕ್ಕೆ ಕಾಲಿಟ್ಟ ಜಾರಂಗೆ ಸತ್ಯಾಗ್ರಹ; ನಾಳೆಯಿಂದ ನೀರು ಸಹ ಕುಡಿಯಲ್ಲ ಎಂದು ಎಚ್ಚರಿಕೆ | Marata quota

Manoj Jarange
Published on

Marata quota: ಮರಾಠ ಸಮುದಾಯದಕ್ಕೆ ಪ್ರತ್ಯೇಕ ಮೀಸಲಾತಿಗಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್​ ಜಾರಂಗೆ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆಯಿಂದ ನೀರು ಸಹ ಕುಡಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಭಾನುವಾರ(ಆಗಸ್ಟ್ 31) ವರದಿಯಾಗಿದೆ.

ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ 43 ವರ್ಷದ ಜರಂಗೆ ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮರಾಠರಿಗೆ ಶೇ. 10 ರಷ್ಟು ಮೀಸಲಾತಿ ನೀಡಬೇಕು, ಅವರನ್ನು ಕುಂಬಿಸ್ ಎಂದು ಗುರುತಿಸಬೇಕು ಮತ್ತು ಒಬಿಸಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಮನೋಜ್ ಜಾರಂಗೆ, ತಮ್ಮ ಬೇಡಿಕೆ ಸಾಂವಿಧಾನಿಕವಾಗಿದ್ದು, ಕುಂಬಿಗಳು ಮತ್ತು ಮರಾಠರು ಒಂದೇ ಸಾಮಾಜಿಕ ಗುಂಪಿಗೆ ಸೇರಿದವರು ಎಂದು ಸರ್ಕಾರಿ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಮರಾಠರಿಗೆ ಶೇ. 10 ರಷ್ಟು ಮೀಸಲಾತಿ ನೀಡಬೇಕು, ಅವರನ್ನು ಕುಂಬಿಸ್ ಎಂದು ಗುರುತಿಸಬೇಕು ಮತ್ತು ಒಬಿಸಿಗೆ ಸೇರಿಸಬೇಕು. ಆಗ ಮಾತ್ರ ಅವರು ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಅರ್ಹರಾಗುತ್ತಾರೆ ಎಂದು ತಿಳಿಸಿದರು.

ಸರ್ಕಾರ ನಮ್ಮ ಬೇಡಿಕೆಗಳನ್ನು ಸ್ವೀಕರಿಸದ ಕಾರಣ, ನಾಳೆಯಿಂದ ನಾವು ಕುಡಿಯುವ ನೀರನ್ನು ಮುಟ್ಟುವುದಿಲ್ಲ. ಕೋಟಾ ಬೇಡಿಕೆ ಈಡೇರುವವರೆಗೆ ನಾವು ಮುಂಬೈನಿಂದ ಹಿಂತಿರುಗುವುದಿಲ್ಲ. ಆದಾಗ್ಯೂ, ನಾವು ಒಬಿಸಿ ವಿಭಾಗದಲ್ಲಿ ಮರಾಠಾ ಮೀಸಲಾತಿಯನ್ನು ಸಾಧಿಸುತ್ತೇವೆ. ಮರಾಠ ಜನ ತೀವ್ರ ದುಃಖದಿಂದ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂಬೈಗೆ ಬಂದಿದ್ದಾರೆ. ಅವರನ್ನು 'ಜನಸಮೂಹ' ಎಂದು ಪರಿಗಣಿಸಬೇಡಿ ಎಂದು ಹೇಳಿದರು.

ಜಾರಂಗೆ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ

ಮಹಾರಾಷ್ಟ್ರದ ಮರಾಠ ಸಮುದಾಯಕ್ಕೆ ಸೇರಿದ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ನಿತೇಶ್ ರಾಣೆ, ಮರಾಠಾ ಸಮುದಾಯವನ್ನು ಒಬಿಸಿ ಎಂದು ವರ್ಗೀಕರಿಸುವ ಬದಲು ಅಸ್ತಿತ್ವದಲ್ಲಿರುವ ಇಡಬ್ಲ್ಯೂಎಸ್ ಕೋಟಾದಿಂದ ಪ್ರಯೋಜನ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಜಾರಂಗೆ ಪ್ರತಿಭಟನೆಗೆ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಹಣಕಾಸು ನೆರವು ನೀಡುತ್ತಿದ್ದಾರೆ ಎಂದು ನಿತೇಶ್ ರಾಣೆ ಆರೋಪಿಸಿದರು. ಎಲ್ಲಾ ಮರಾಠರನ್ನು ಕುನ್ಬಿಸ್ ಎಂದು ವರ್ಗೀಕರಿಸಿ ಅವರನ್ನು ಒಬಿಸಿ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆ ಮಹಾರಾಷ್ಟ್ರದಾದ್ಯಂತ ಸ್ವೀಕಾರಾರ್ಹವಲ್ಲ ಎಂದು ನಿತೇಶ್ ರಾಣೆ ಹೇಳಿದ್ದಾರೆ.

ಸೋಲಾಪುರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಕಾಂತ್ ಪಾಟೀಲ್, ಮರಾಠರು ಎಂದಿಗೂ ಅಸ್ಪೃಶ್ಯತೆಯನ್ನು ಎದುರಿಸಲಿಲ್ಲ ಮತ್ತು ಜಾತಿಯಿಂದ ಹಿಂದುಳಿದಿಲ್ಲ, ಆದರೆ ವರ್ಷಗಳಲ್ಲಿ ಕುಗ್ಗುತ್ತಿರುವ ಭೂ ಹಿಡುವಳಿಗಳು ಅವರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿವೆ ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net