ಖಾಸಗಿ ವೈದ್ಯಕೀಯ ಸಂಸ್ಥೆ ನೋಂದಣಿ ಬಿಗಿ | Governor consent

Rajabhavan
Published on

ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಅಂಬುಲೆನ್ಸ್‌ಗಳ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆ ಮತ್ತಷ್ಟು ಬಿಗಿಗೊಳಿಸುವ ಅಧ್ಯಾದೇಶ ಅನುಷ್ಠಾನಕ್ಕೆ ಬಂದಿದೆ.

‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧ್ಯಾದೇಶ, 2025’ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಂಕಿತ ಹಾಕಿದ್ದು, ರಾಜ್ಯಪತ್ರದಲ್ಲಿ ಸೋಮವಾರ ಪ್ರಕಟವಾಗಿದೆ.

ಖಾಸಗಿ ವ್ಯಕ್ತಿಗಳು ಪೂರೈಸುವ ಅಂಬುಲೆನ್ಸ್ ಸೇವೆಗಳ ತಾತ್ಕಾಲಿಕ ಹಾಗೂ ಶಾಶ್ವತ ನೋಂದಣಿಗಾಗಿ ನೋಂದಣಿ ಮತ್ತು ಕುಂದು-ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಹಾಗೆಯೇ ಖಾಸಗಿ ವೈದ್ಯಕೀಯ ಸಂಸ್ಥೆಗಳ ಶಾಶ್ವತ ನೋಂದಣಿ ಮತ್ತು ನವೀಕರಣಕ್ಕೆ ಅಳತೆಗೋಲು ನಿಗದಿಪಡಿಸಲಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಯ ಉದ್ಯೋಗಿಗಳು ಅಥವಾ ಯಾವುದೇ ಅನರ್ಹ ವೈದ್ಯಕೀಯ ಅಧಿಕಾರಿ ಅಥವಾ ಅರೆವೈದ್ಯಕೀಯ ಸಿಬ್ಬಂದಿಯಾಗಿದ್ದ ಸಂದರ್ಭದಲ್ಲಿ ಕಠಿಣ ಕ್ರಮಕ್ಕೆ ಈ ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅಪರಾಧ ನಿರ್ಣಯವಾದ ಮೇಲೆ ಅಂತಹ ಖಾಸಗಿ ವೈದ್ಯಕೀಯ ಸಂಸ್ಥೆಗೆ ಮೂರು ವರ್ಷಗಳ ಅವಧಿಗೆ ವಿಸ್ತರಿಸಬಹುದಾದ ಕಾರಾಗೃಹ ಸಜೆ ಮತ್ತು ಒಂದು ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net