ಸಿಎಂಗೆ ಮಣಿದ ಖಾಸಗಿ ಮೆಡಿಕಲ್ ಕಾಲೇಜುಗಳು

BSY JPG
Published on

ಬೆಂಗಳೂರು: ಯಾವುದೇ ಸಬೂಬು ಹೇಳದೆ ಒಪ್ಪಿಕೊಂಡಂತೆ 4,500 ಹಾಸಿಗೆಗಳನ್ನು ನೀಡಬೇಕೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಖಡಕ್ ಸೂಚನೆಗೆ ಖಾಸಗಿ ವೈದ್ಯಕೀಯ ಕಾಲೇಜುಗಳು ಮಣಿದಿವೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕರೆದಿದ್ದ ಸಭೆಯಲ್ಲಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರು ಭಾನುವಾರವೇ ಹಾಸಿಗೆಗಳನ್ನು ಕರೊನಾ ಚಿಕಿತ್ಸೆಗೆ ಮೀಸಲಿಡಲು ಸಮ್ಮತಿಸಿದರು. ಕೆಲವು ವೈದ್ಯಕೀಯ ಕಾಲೇಜುಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ವೆಂಟಿಲೇಟರ್ ಸಹಿತ ಶೇ.80 ಹಾಸಿಗೆಗಳನ್ನು ಒದಗಿಸುವುದಾಗಿ ತಿಳಿಸಿದರು. ಸಭೆಗೆ ಗೈರು ಹಾಜರಾದ ವೈದೇಹಿ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಿ, ಕಾನೂನುರೀತ್ಯ ಕಠಿಣ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಬಿಎಸ್​ವೈ ನಿರ್ದೇಶಿಸಿದರು. ಒಪ್ಪಿಕೊಂಡಂತೆ ಮಾಡಿ ಮತ್ತದೇ ಕುಂಟು ನೆಪ, ನುಣುಚಿಕೊಳ್ಳುವ ತಂತ್ರ ಹೂಡಿದರೆ ವಿಪತ್ತು ನಿರ್ವಹಣಾ ಕಾಯ್ದೆ ಸೇರಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಿಎಂ ಗರಂ ಆಗಿ ಎಚ್ಚರಿಸಿದರು.

ಹಾಸಿಗೆ ಕೊರತೆಯಾಗಬಾರದು: ಬೆಂಗಳೂರು: ರಾಜ್ಯದಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಧಾರಣ ಮತ್ತು ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರಿ ಹಾಗೂ ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಈ ಸಂಬಂಧ ಶನಿವಾರ ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ ಆಯುಕ್ತ ಪಂಕಜ್​ಕುಮಾರ್ ಪಾಂಡೆ, ಆಸ್ಪತ್ರೆಗಳಲ್ಲಿ ದಾಖಲಾಗಿರುವ ಲಕ್ಷಣರಹಿತ ಅಥವಾ ಅತಿ ಕಡಿಮೆ ಲಕ್ಷಣಗಳಿರುವ ಸೋಂಕಿತರನ್ನು ಸಮೀಪದ ಕೋವಿಡ್ ನಿಗಾ ಕೇಂದ್ರಗಳಿಗೆ ಅಥವಾ ಅರ್ಹರನ್ನು ಗೃಹ ಆರೈಕೆಗೆ ಒಳಪಡಿಸಬೇಕು. ಆ ಮೂಲಕ ಸಾಧಾರಣ ಮತ್ತು ಗಂಭೀರ ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗೆ ಹಾಸಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ನೇಮಕ:  ಮೆಡಿಕಲ್ ಕಾಲೇಜುಗಳ ಹಾಸಿಗೆಗಳ ಲಭ್ಯತೆ, ಹಂಚಿಕೆ ಮೇಲೆ ನಿಗಾ ಇಡಲು ಈಗಾಗಲೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಸರ್ಕಾರಕ್ಕೆ ಪ್ರತಿ ಕ್ಷಣದ ಮಾಹಿತಿ ನೀಡಲಿದ್ದಾರೆ ಎಂದ ಬಿಎಸ್​ವೈ, ಸಭೆಯಲ್ಲಿ ಒಪ್ಪಿ ನಂತರ ಕೈಬಿಟ್ಟರೆ ಸುಮ್ಮನಿರುವುದಿಲ್ಲ ಎನ್ನುವ ತೀಕ್ಷ್ಣ ಎಚ್ಚರಿಕೆಯ ಸಂದೇಶವನ್ನು ಖಾಸಗಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರಿಗೆ ರವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net