ರೋಗಿಗೆ ವಿಭೂತಿ ಹಚ್ಚಲು ಮುಂದಾದವರನ್ನು ಹಿಗ್ಗಾಮುಗ್ಗಾ ಥಳಿಸಿದ ಆಸ್ಪತ್ರೆ ಸಿಬ್ಬಂದಿ

Viral Fight
Published on

ಇಂದೋರ್​: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯೋಬ್ಬರಿಗೆ ದೇವರ ವಿಭೂತಿ ಹಚ್ಚಲು ಮುಂದಾಗಿದ್ದಕ್ಕೆ ಆಸ್ಪತ್ರೆಯ ಸಿಬ್ಬಂದಿ ರೋಗಿಯ ಸಂಬಂಧಿಕರನ್ನು ಹಿಡಿದು ಥಳಿಸಿರುವ ಘಟನೆ ಮದ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಇಂದೋರ್​ನ ಅರಬಿಂದೋ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹೊಡೆದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.

Viral Fight

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಗುಣ ಮೂಲದ ಮಹಿಳೆ ಸುನೀತಾ ಅವರನ್ನು ಚಿಕಿತ್ಸೆಗಾಗಿ ಅರಬಿಂದೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ (ಆಗಸ್ಟ್​ 30) ಸಂಜೆ ಅವರ ಪುತ್ರ ಜೀತೇಂದ್ರ, ಪುತ್ರಿ ಜ್ಯೋತಿ ಹಾಗೂ ಅವರ ಸಂಬಂಧಿ ದೇವಸ್ಥಾನ ಒಂದರಲ್ಲಿ ಪೂಜೆ ಮಾಡಿಸಿಕೊಂಡು ವಿಭೂತಿಯನ್ನು ತಂದಿದ್ದರು.

ತೀವ್ರ ನಿಗಾ ಘಟಕದಲ್ಲಿ ರೋಗಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಅವರನ್ನು ನೋಡಿ ವಿಭೂತಿ ಹಚ್ಚಲು ಅವಕಾಶ ನೀಡುವಂತೆ ಮನವಿ ಮಾಡಿದ್ಧಾರೆ. ಇದಕ್ಕೆ ಸೆಕ್ಯೂರಿಟಿ ಒಪ್ಪದ ಕಾರಣ ವಾಗ್ವಾದ ಏರ್ಪಟ್ಟಿದೆ. ಕ್ಷಣಾರ್ಧದಲ್ಲೇ ಇದು ಹೊಡೆದಾಟಕ್ಕೆ ಕಾರಣವಾಗಿದ್ದು, ಆಸ್ಪತ್ರೆ ಸಿಬ್ಬಂದಿ ರೋಗಿಯ ಸಂಬಂಧಿಕರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದಾದ ಬಳಿ ರೋಗಿಯನ್ನು ಡಿಸ್ಚಾರ್ಜ್​ ಮಾಡಲಾಗಿದ್ದು, ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೊಡೆದಾಟದ ಸಂಬಂಧ ಪ್ರಕರಣ ದಾಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net