ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿ-ಪಾಲಕರಿಗೆ ಉಪಟಳ

Online Class
Published on

ವಿಜಯವಾಣಿ ವಿಶೇಷ ರಾಣೆಬೆನ್ನೂರ/ರಾಯಚೂರು

ಸರ್ಕಾರಿ ಆದೇಶವನ್ನೂ ಮೀರಿ ಹಾವೇರಿ ಜಿಲ್ಲೆಯಲ್ಲಿ ಕೆಲ ಖಾಸಗಿ ಶಾಲಾ-ಕಾಲೇಜ್​ಗಳು ಆನ್​ಲೈನ್ ತರಗತಿ ಹೆಸರಿನಲ್ಲಿ ಶುಲ್ಕ, ಪುಸ್ತಕದ ಹೆಸರಿನಲ್ಲಿ ಹಣ ವಸೂಲಿಗಿಳಿದಿವೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿ-ಪಾಲಕರ ಮನವೊಲಿಸುತ್ತಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಮುನ್ನವೇ ಆನ್​ಲೈನ್​ನಲ್ಲಿ ಪಿಯುಸಿ ತರಗತಿ ನಡೆಸುವುದಾಗಿ ಹೇಳಿ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿವೆ. ಈ ಕುರಿತು ಅರ್ಜಿ ಆಹ್ವಾನಿಸಿದ್ದಲ್ಲದೆ ಕೆಲ ದಿನಗಳ ಬಳಿಕ ಆಫ್​ಲೈನ್ ಕಾಲೇಜ್ ಎನ್ನುತ್ತಿವೆ. ಜತೆಗೆ ಬ್ಯಾಂಕ್ ಖಾತೆ ಸಂಖ್ಯೆ ನೀಡಿ ಆನ್​ಲೈನ್ ತರಬೇತಿ ಶುಲ್ಕದ ಹೆಸರಿನಲ್ಲಿ ಡೊನೇಷನ್ ವಸೂಲಿ ಮಾಡಲಾಗುತ್ತಿದೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ.

ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿ: ಲಾಕ್​ಡೌನ್​ನಿಂದ ಜನತೆ ತತ್ತರಿಸಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಲಾಕ್​ಡೌನ್ ಸಡಿಲಿಕೆ ಬಳಿಕವೂ ಆರ್ಥಿಕ ಕ್ಷೇತ್ರ ಹೇಳಿಕೊಳ್ಳುವಷ್ಟು ಬಲಗೊಂಡಿಲ್ಲ. ಆದ್ದರಿಂದ ಜಿಲ್ಲಾಡಳಿತ ಖಾಸಗಿ ಶಾಲಾ-ಕಾಲೇಜುಗಳ ಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂಬá-ದು ಪಾಲಕರ ಆಗ್ರಹ.

ಮಕ್ಕಳು ತಮ್ಮ ಶಾಲಾ-ಕಾಲೇಜ್ ಬಿಟ್ಟು ಬೇರೆಡೆ ಹೋಗಬಾರದು ಎಂದು ಖಾಸಗಿ ಶಾಲೆಗಳು ಈ ರೀತಿ ಮಾಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. | ಎಂ. ಮೆಹರವಾಡೆ ಪಾಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ತೊಂದರೆಗೆ ಒಳಗಾದವರು ನೇರವಾಗಿ ನಮಗೆ ದೂರು ನೀಡಿದರೆ, ಅಂಥ ಶಿಕ್ಷಣ ಸಂಸ್ಥೆಯವರ ವಿರುದ್ಧ ಕಾನೂನುಪ್ರಕಾರ ಕ್ರಮಕೈಗೊಳ್ಳಲಾಗುವುದು. | ಎನ್. ಶ್ರೀಧರ ಬಿಇಒ ರಾಣೆಬೆನ್ನೂರ

15ರಿಂದಲೇ ಪಾಠ ಎಂದು ಸಂದೇಶ

ಒಂದರಿಂದ ಏಳನೇ ತರಗತಿವರೆಗೆ ಆನ್​ಲೈನ್ ಪಾಠ ಇಲ್ಲ ಎಂಬ ಸರ್ಕಾರಿ ಆದೇಶವಿದ್ದರೂ ರಾಯಚೂರು ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆಫ್​ಲೈನ್ ಮೂಲಕವೇ ಜೂ.15ರಿಂದ ಪಾಠ ಮಾಡುತ್ತೇವೆ ಎಂದು ಪಾಲಕರಿಗೆ ಸಂದೇಶ ಕಳಿಸಿವೆ.

ವೇಳಾಪಟ್ಟಿ ಸಿದ್ಧಪಡಿಸಿದ್ದಲ್ಲದೆ, ಕೆಲ ಶಿಕ್ಷಣ ಸಂಸ್ಥೆಗಳು ಪಠ್ಯಪುಸ್ತಕ ಪಡೆಯುವಂತೆ ಸಂದೇಶ ಕಳುಹಿಸಿದ್ದಾರೆ. ಇಲಾಖೆಗೆ ದೂರು ನೀಡಿದರೆ ಮಕ್ಕಳ ಭವಿಷ್ಯಕ್ಕೆ ಕುತ್ತಾಗಬಹುದು ಎಂದು ಪಾಲಕರು ಸುಮ್ಮನಿದ್ದಾರೆ. ಜೂ.15ರಿಂದ ದಿನಾ ಒಂದು ವಿಷಯದ ಪಾಠ ಶಿಕ್ಷಕರು ವಿಡಿಯೋ ಮಾಡಿ, ಅದನ್ನು ಮಕ್ಕಳು-ಪಾಲಕರ ತರಗತಿವಾರು ವಾಟ್ಸ್​ಆಪ್ ಗ್ರೂಪ್​ಗೆ ಹಾಕುತ್ತಾರೆ. ಇದನ್ನು ಪಾಲಕರು ಮಕ್ಕಳಿಗೆ ಕೇಳಿಸಿ, ಬರೆದಿಟ್ಟುಕೊಳ್ಳಬೇಕು. ವಾರದ ಬಳಿಕ ಟೆಸ್ಟ್ ನಡೆಸುವುದಾಗಿಯೂ ಶಿಕ್ಷಣ ಸಂಸ್ಥೆಗಳು ಹೇಳಿವೆ. ಇದನ್ನೂ ಓದಿ: ಭವಿಷ್ಯದಲ್ಲಿ ಎಲ್ಲ ಸೌಕರ್ಯವುಳ್ಳ ಮಾದರಿ ಎಪಿಎಂಸಿ ನಿರ್ಮಾಣವಾಗಲಿ

ಸದ್ಯ ಯಾವುದೇ ರೂಪದಲ್ಲೂ ಪಾಠ-ತರಗತಿ ಆರಂಭಿಸುವಂತಿಲ್ಲ. ಹಾಗೇನಾದರೂ ಸಂದೇಶ ಬಂದಿದ್ದರೆ ಅಂಥ ಶಾಲೆಗಳ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. | ಬಿ.ಎಚ್.ಗೋನಾಳ ಡಿಡಿಪಿಐ ರಾಯಚೂರು

ಆನ್​ಲೈನ್​ನಲ್ಲಿ ಕಾಮುಕರ ಕಿರಿಕಿರಿ

ಬೆಂಗಳೂರು: ಆನ್​ಲೈನ್​ನಲ್ಲಿ ಬೋಧಿಸುತ್ತಿರುವ ಶಿಕ್ಷಕಿಯರಿಗೆ ಕಿಡಿಗೇಡಿಗಳು ಕಿರಿಕಿರಿ ನೀಡುತ್ತಿದ್ದು, ಶಿಕ್ಷಣ ಸಂಸ್ಥೆಗಳು ಪೊಲೀಸರ ಮೊರೆ ಹೋಗಿವೆ. ಆನೇಕಲ್ ಸಮೀಪದ ಆಯುರ್ವೆದಿಕ್ ಕಾಲೇಜು ಶಿಕ್ಷಕಿ ಜೂಮ್ ಆಪ್​ನಲ್ಲಿ ತರಗತಿ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿ ಲಾಗಿನ್ ಆಗಿ, ‘ಕ್ಲಾಸ್ ನಂತರ ಸಿಗ್ತೀಯಾ?’ ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಜಿಗಣಿ ಠಾಣೆ ಪೊಲೀಸರು ಆರೋಪಿ ಬಿಕಾಂ ವಿದ್ಯಾರ್ಥಿ ಹೈದರ್ ಎಂಬಾತನನ್ನು ಬಂಧಿಸಿದ್ದಾರೆ. ಸ್ನೇಹಿತೆ, ಅದೇ ಕಾಲೇಜಿನ ವಿದ್ಯಾರ್ಥಿನಿಯಿಂದ ಆತ ಲಾಗಿನ್ ಐಡಿ ಪಡೆದಿದ್ದ.

ಹೆಬ್ಬಾಳದ ಖಾಸಗಿ ಶಾಲಾ ಶಿಕ್ಷಕಿ ಜೂಮ್ ಆಪ್​ನಲ್ಲಿ ಆನ್​ಲೈನ್ ತರಗತಿ ನಡೆಸುತ್ತಿದ್ದಾಗ ಲಾಗಿನ್ ಆದ ಅಪರಿಚಿತ ಅಸಭ್ಯವಾಗಿ ಮಾತನಾಡಿದ್ದ. ಶಿಕ್ಷಕಿಯ ದೂರಿನ ಮೇರೆಗೆ ಸೈಬರ್ ಕ್ರೖೆಂ ಠಾಣೆ ಪೊಲೀಸರು ಮಾಹಿತಿ ಕೋರಿ ಜೂಮ್ ಕಂಪನಿಗೆ ಪತ್ರ ಬರೆದಿದ್ದು, ಆನ್​ಲೈನ್ ತರಗತಿಗೆ ನೀಡುವ ಲಾಗಿನ್ ಐಡಿ ಯಾರೊಂದಿಗೆ ಹಂಚಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net